ಚಳಿಗಾಲ, ಬೆಳಿಗ್ಗೆ ಹಾಸಿಗೆಯಿಂದ ಏಳಬೇಕಾದರೆ ಗಡಿಯಾರದೊಂದಿಗೆ ಮಹಾಯುದ್ಧವೇ ನಡೆದುಬಿಡುತ್ತದೆ. ಹಾಗೂ ಹೀಗೂ ಕಷ್ಟಪಟ್ಟು ಗಡಿಯಾರ, ನಿನಗೇ ಜೈ ಸೋಲೊಪ್ಪಿಕೊಂಡದ್ದಾಯಿತೆಂದು ಕಣ್ಣು ತೆರೆದರೆ, ರೆಪ್ಪೆಯೊಳಗೆ ಮರಳುಹಾಕಿ ತಿಕ್ಕಿದಂತೆ ಹಿಂಸೆ. ಸರಿ, ಸಾಹಸ ಮಾಡಿ ಕಣ್ಣು ತೆರಿದದ್ದಾಯಿತೆನ್ನುವಷ್ಟರಲ್ಲಿ ಇನ್ನೊಂದು ಭೀಕರ ಸಮಸ್ಯೆ! ಕಾಲಿಗೆ ದೊಡ್ಡದೊಂದು ಕಬ್ಬಿಣದ ಗುಂಡು ಕಟ್ಟಿಕೊಂಡಂತೆ, ಎದ್ದು ನಡೆಯಲಸಾಧ್ಯ.... ನಮಗಿಂತ ಮುಂಚೆ ಇಲ್ಲಿ ಸೋಂಬೇರಿತನ ಎದ್ದು ತಾಂಡವವೇ ಆಡಿಬೆಟ್ಟಿರುತ್ತದೆ. ಈ ಸೋಮಾರಿತನದ ಪರಮಾವಧಿಯಿಂದ ಹೊರ ಬರುವುದು ಸುಲಭದ ಮಾತಲ್ಲ ಬಿಡಿ.
ಪಕ್ಷಿವೀಕ್ಷಣೆಯಂಥ ಹವ್ಯಾಸ ರೂಢಿಸಿಕೊಂಡರೆ, ಪ್ರಕೃತಿಯಲ್ಲಿನ ಕುತೂಹಲ ತಿಳಿಯುವ ಕಾತುರದಲ್ಲಿ ಚಳಿ, ಮಳೆ, ಗಾಳಿಗಳ್ಯಾವೂ ಲೆಕ್ಕಕ್ಕೆ ಬರೊಲ್ಲ!
ಪ್ರಕೃತಿ ನೋಡಲು ಬೆಳಗ್ಗಿನ ಜಾವ ಪ್ರಶಸ್ಥ ! ಮಕ್ಕಳಿಗೆ ಈ ರೀತಿ ಯಾವುದಾದರೊಂದು ಹುಚ್ಚು ಹಿಡಿಸಿನೋಡಿ. ತಂತಾನೆ ಉತ್ತಮ ಆರೋಗ್ಯ ಹಾಗು ಶಿಸ್ಥಿನ ಜೀವನರೂಪುಗೊಂಡರೆ ಆಶ್ಛರ್ಯವೇನಿಲ್ಲ, ಯೋಚನೆಮಾಡುವ ದಿಕ್ಕು ದೆಶೆ ಬದಲಾಗಿ ಉನ್ನತಮಟ್ಟದಲ್ಲಿ ಯೋಚಿಸುವ ಸಾಮರ್ಥ್ಯ ಬೆಳೆಸುವ ಅವಕಾಶ ದೊರೆಯುತ್ತದೆ. ಎಲ್ಲರಲ್ಲೊಬ್ಬರಾಗಿ ಉಳಿಯದೆ ತಮ್ಮದೇ ಆದ ಸಾಧನೆಯ ಮಾರ್ಗ ಕಾಣಬಹುದು - ಇದೇ ಹವ್ಯಾಸಗಳಿಂದ ದೊರೆಯುವ ಲಾಭಗಳು.
ಅದಿರಲಿ, ಪ್ರಕೃತಿಯಲ್ಲಿ ಎಣಿಕೆಗೆ ಸಿಗದಷ್ಟು ಕುತೂಹಲ ಕೆರಳಿಸುವ ವಿಷಯಗಳಿವೆ! ಇಲ್ಲೋಂದು ಅದರ ಸಣ್ಣ ಝಲಕ್ಕಿದೆ, ಅದೇ ಪೆರಿಗ್ರೇನ್ ಫಾಲ್ಕಂನ್ peregrine falcon (ದೊಡ್ಡಚಾಣ)
ಇದೊಂದು ಸಾಮಾನ್ಯ ಹಕ್ಕಿಯಲ್ಲ, ಕಾಣಸಿಗುವುದೇ ಕಷ್ಟ. ನಮ್ಮಲ್ಲಿಗೆ ಬರುವ ಚಳಿಗಾಲದ ವಲಸಿಗ ಅಥಿತಿ. ಇದರಲ್ಲೇನಿದೆ ಅಂಥ ವಿಷೇಶ ? ಮೈ ರೋಮಾಂಚನಮಾಡುವ ವಿಚಾರ ಇದೆ! ಇದೊಂದು ಪ್ರಾಣಿ ಪ್ರಪಂಚದ ಫೈಟರ್ ಜೆಟ್ (fighter jet) ಅಥವ ಎರ್ ಟು ಎರ್ ಕ್ಷಿಪಣಿಯೆಂದರೆ ತಪ್ಪಿಲ್ಲ. ದೊಡ್ಡ ಚಾಣ, ಪಕ್ಷಿ ಹಾಗು ಪ್ರಾಣಿ ಪ್ರಪಂಚದ ಅತ್ಯಂತ ವೇಗವಾಗಿ ಕ್ರಮಿಸಬಲ್ಲ ಜೀವಿ. ಹಾಗೆದ್ದರೆ ಇದರ ಗರಿಷ್ಟ ವೇಗ ಎಷ್ಟಂತೀರ? ಬರೊಬ್ಬರಿ 380 ಕಿಲೋಮೀಟರ್ ಗಂಟೆಗೆ ಹಾರಬಲ್ಲ ಸಾಮರ್ಥ್ಯ ದಾಖಲಾಗಿದೆ. ತನ್ನ ಬೇಟೆಯನ್ನು ಗಾಳಿಯಲ್ಲೇ ಆಕ್ರಮಣ ಮಾಡಿ (ಗಂಟೆಗೆ ಸುಮಾರು 320 ಕಿಲೋಮೀಟರ್ ವೇಗವಾಗಿ ಡೈವ್ ಹಾಕಿ ತನ್ನ ಬಲವಾದ ಕಾಲು ಮತ್ತು ಉಗುರು ಪಂಜದಿಂದ ಹೊಡೆದುರುಳಿಸಿ), ಬೇಟೆ ಕೆಳಗೆ ಬಿದ್ದನಂತರ ಸಿಗಿದು ತಿನ್ನುತ್ತದೆ.
ಮತ್ತೊಂದು ಗಮನಿಸಬೇಕಾದ ವಿಶೇಷ ಇದೆ, ದೊಡ್ಡ ಚಾಣದ ಮೂಗು ! ಅಷ್ಟೊಂದು ವೇಗದಲ್ಲಿ ಹಾರಬೇಕಾದರೆ ಉಸಿರಾಟ? ನಾವು ಮೋಟಾರು ಬೈಕ್ನಲ್ಲಿ ಗಂಟೆಗೆ 80-90 ಕಿಲೋಮಿಟರ್ ವೇಗದಲ್ಲಿ ಹೋಗುವಾಗ ಉಸಿರಾಡಲು ಕಷ್ಟ ಅಲ್ವ? ತೀವ್ರವಾದ ವಾಯುವೇಗದಿಂದ ಉಸಿರಾಡಲು ತೊಂದರೆಯಾಗಿಬಿಡುತ್ತದೆ. ಚಾಣದ ಮೂಗಿನ ಮೂಳೆಗಳು ಶಂಕುವಿನಾಕಾರದ ರಚನೆ ನೀಡಿ ಗಾಳಿಯವೇಗವನ್ನು ತಗ್ಗಿಸಿ ಉಸಿರಾಡುವ ಹಾಗೆ ರೂಪುಗೊಂಡಿರುತ್ತದೆ.
ದೊಡ್ಡ ಚಾಣಕ್ಕೂ, ಕೆಲವು ಸೂಪರ್ಸಾನಿಕ್ ಫೈಟರ್ ಜೆಟ್ಗೂ ( ಉದಾ: ಅಮೇರಿಕಾದ ಎಫ್ 22 ರಾಪ್ಟರ್) ನಿಕಟ ಸಂಭಂದ ಇದೆ, ಇಂಜಿನಿಯರ್ಗಳು ದೊಡ್ಡ ಚಾಣದ ಮೂಗಿನ ಅಧ್ಯಾಯನ ಮಾಡಿ, ಕೆಲವು ಪೈಟರ್ ಜೆಟ್ಗಳ ಎರ್ ಇನ್ಟೇಕ್ (air intake system) ವಿನ್ಯಾಸಮಾಡಿರುವುದುಂಟು. ಇಲ್ಲವಾದಲ್ಲಿ ಸೂಪರ್ಸಾನಿಕ್ ವೇಗದಲ್ಲಿ ಹಾರುವಾಗ ಅತಿಯಾದ ವಾಯುವೇಗದಿಂದ ಜೆಟ್ ಇಂಜಿನ್ ಛೊಕ್ ಆಗುವ ಸಮಸ್ಯೆ ಎದುರಾಗುತ್ತಿತ್ತು.
ಈಗಲೂ ಚಾಣಗಳ ಮೇಲೆ ಸಂಶೋಧನೆಗಳು ನಡೆಯುತ್ತಿದೆ.
---------