Thursday 3 June 2021

ಹಕ್ಕಿ ಗೂಡು

ವರ್ಷಗಳ ಹಿಂದೆ ಹೀಗೊಂದು ಸುದ್ದಿ ಓದಿದ್ದೆ.

ಅಮೆರಿಕದಲ್ಲಿ ಹಲವು ದಶಲಕ್ಷದ ದೊಡ್ಡ ಜನಪರ ಕಾಮಗಾರಿ ಕೇವಲ ಒಂದು ಹಮ್ಮಿಂಗ್ ಹಕ್ಕಿಯ ಮೊಟ್ಟೆಗಳಿದ್ದ ಗೂಡಿನ ಕಾರಣಕ್ಕೆ ಕೆಲವು ತಿಂಗಳುಗಳೇ (ಮರಿಯಾಗಿ ತಂತಾನೆ ಜಾಗ ಬಿಡುವವರೆಗೆ) ನಿಂತುಹೋಗಿತ್ತಂತೆ ! ಅದೊಂದು ರೋಚಕ ಸುದ್ದಿಯೇ, ಹಮ್ಮಿಂಗ್ ಹಕ್ಕಿ ಪ್ರಪಂಚದ ಅತ್ಯಂತ ಪುಟ್ಟ ಹಕ್ಕಿ, ಹೆಬ್ಬೆರಳ ಗಾತ್ರದ್ದು !

ಈಗ ಅದರ ನೆನಪು ಯಾಕೆ ಅಂತಿದ್ರೆ? ಇವತ್ತು ಬೆಳಿಗ್ಗೆ ತೋಟದಲ್ಲಿ ಬಾಳೆಗಿಡಗಳ ಬುಡದಲ್ಲಿ ಹೆಚ್ಚುವರಿ ಸಸಿಗಳನ್ನ ತೆರವು ಮಾಡುವಾಗ ಒಂದು ಕಡೆ ಬುಲ್ ಬುಲ್ ಹಕ್ಕಿಯ ಮೊಟ್ಟೆಯಿದ್ದ ಗೂಡು ! ಮತ್ತೊಂದು ಕಡೆ ಬೆಣ್ಣೆ ಹಣ್ಣಿನ ಗಿಡದ ಎಲೆಯಲ್ಲಿ ಟುವ್ವಿ ಹಕ್ಕಿ  ಹೊಲೆದಿದ್ದ ನಲ್ಮೆಯ ಪುಟ್ಟ ಮನೆ  ! ಹೆಬ್ಬೇವು ಗಿಡದಲ್ಲಿ ಮಧುರ ಕಂಠ ಹಕ್ಕಿಯ ಮುದ್ದಿನ ಮೇಲಂತಸ್ತು , ಮೊದಲ ಮಳೆಗೆ ಗೊಬ್ಬರಕ್ಕೆ ಹುರಳಿ ಚೆಲ್ಲಲು ಹೋಗಿ ಇನ್ನೊಂದು ಭಾಗದಲ್ಲಿ ಕಾಗಕ್ಕ ಮತ್ತದರ ಸಂಗಾತಿಯಿಂದ ಅಣಕು ಆಕ್ರಮಣದ ಖಡಕ್ ಎಚ್ಚರಿಕೆ.... 

ಅಲ್ಲಿಗೆ, ಆಯಾ ಕೆಲಸ ಅಲ್ಲೇ ಬಿಟ್ಟು, ಆ ಹಕ್ಕಿಗಳ ಸಂತಾನ ಕಾಲ ಮುಗಿಯುವವರೆಗೆ ತೀರ ಅನಿವಾರ್ಯವಾಗದ ಹೊತ್ತು ಅಲ್ಲಿ ಮೂಗುತೂರಿಸುವ ಬಾಬ್ತೆ ಬೇಡವೆಂದು ಬರುವ ಸಮಯದಲ್ಲಿ ಅಂಥಾ ದೊಡ್ಡ ಕಾಮಗಾರಿಯೇ ಮುಂದೂಡಿದ ಸುದ್ದಿ ಓದಿದ್ದು ನೆನಪಿಸಿಕೊಂಡು ನಮ್ಮದೇನು ಅನ್ನಿಸಿತು ! 

ಅವು ಬಿಟ್ಟಿದ್ದ ಉಳಿದ ಭಾಗದಲ್ಲಿ ನಮ್ಮ ಕೃಷಿ ...

ಆಫ್ಟರ್ ಆಲ್ ಈ ಹಕ್ಕಿಗಳ ಹಿಂದೆ ಬಿದ್ದಿದ್ದಕ್ಕೆ ಕೃಷಿಕಡೆ ಒಲವು ಮೂಡಿದ್ದು, ಈ ಹಕ್ಕಿಗಳಿಂದಲೇ ನಮ್ಮಲ್ಲಿ ಕೀಟಗಳ ಹತೋಟಿ !

ಗೂಡು ಕಟ್ಟಿ ಮರಿಗಳಿಗೆ ಗುಟುಕು ನೀಡುವ ಹಕ್ಕಿಗಳು ಶಾಖಾಹಾರಿಯಾಗಿದ್ದರೂ ಮರಿಗಳಿಗೆ ಹುಳು ಹುಪ್ಪಟೆಗಳನ್ನೇ ಗುಟುಕಾಗಿ ಕೊಡುತ್ತವೆ, ಕಾರಣ ಕೀಟಗಳಲ್ಲಿರುವ ಹೇರಳವಾಗಿ ದೊರೆಯುವ ಪ್ರೊಟೀನ್ - ಅಂದರೆ ಗಿಡಗಳನ್ನ ಭಾದಿಸುವ ಕೀಟಗಳ ಹೆಡೆಮುರಿ ಕಟ್ಟಿ ನಿಯಂತ್ರಣದಲ್ಲಿಡಲು ಈ ರೀತಿ ಗೂಡುಗಳು ಬೇಕು. ಗೂಡು ಕಟ್ಟಲು ಹಕ್ಕಿಗಳು ಗಿಡಗಳನ್ನ ಅವಲಂಭಿಸುತ್ತವೆ, ಗಿಡಮರಗಳು ಆಶ್ರಯನೀಡಿ ತಮ್ಮನ್ನ ಹೀರುವ ಕೀಟಗಳನ್ನ ಶಮನ ಮಾಡಿಕೊಳ್ಳುತ್ತವೆ ! ಪ್ರಕೃತಿಯಲ್ಲಿನ ಪರಸ್ಪರ ಅವಲಂಭನೆಗೆ  ಇದೊಂದು ಉದಾಹರಣೆ....