Sunday, 10 April 2022

ಪರದೇಶದಲ್ಲಿ ಕಳೆದ ವಸ್ತು ಮತ್ತೆ ಸಿಕ್ಕಾಗ ಮರುಭೂಮಿಯಲ್ಲಿ ಒಯಾಸಿಸ್ ಸಿಕ್ಕಷ್ಟು - ಲಾಸ್ಟ್ ಅಂಡ್ ಫೌಂಡ್ !

ಪರದೇಶದಲ್ಲಿ ಕಳೆದ ವಸ್ತು ಮತ್ತೆ ಸಿಕ್ಕಾಗ ಮರುಭೂಮಿಯಲ್ಲಿ ಒಯಾಸಿಸ್ ಸಿಕ್ಕಷ್ಟು - 
ಲಾಸ್ಟ್ ಅಂಡ್ ಫೌಂಡ್ !

ಅಂಗೋಲ, ಆಫ್ರಿಕಾ ಖಂಡದ ನೈಋತ್ಯದಲ್ಲಿರುವ ಆ ಪ್ರಾಂತ್ಯದ ಒಂದು ದೊಡ್ಡ ದೇಶ. ಕೆಲವರು ಈ ದೇಶದ ಹೆಸರು ಮೊದಲ ಬಾರಿಗೆ ಕೇಳುತ್ತಿರಬಹುದು. ನನಗೂ ಒಂದೈದು ವರ್ಷಗಳ ಹಿಂದೆ ಇಂಥದ್ದೊಂದು ದೇಶದ ಹೆಸರು ಮೊದಲ ಬಾರಿಗೆ ಕೇಳಿಸಿದ್ದು. ಒಂದೇ ಒಂದು ದಶಕದ ಹಿಂದೆ ಸಂವಿಧಾನ ರಚಿಸಿ ಅಳವಡಿಸಿಕೊಂಡಿರುವ, ತೀರ ಇತ್ತೀಚೆಗಷ್ಟೇ ಅಭಿವೃದ್ಧಿ ಪಥದಲ್ಲಿ ಸಾಗಿರುವದೇಶ.... ಹಳೆಯ ಪೋರ್ಚುಗಲ್ಲರ ಕೈಕೆಳಗಿದ್ದ ಈ ರಾಷ್ಟ್ರಕ್ಕೆ 1975ರಲ್ಲಿ ಸ್ವತಂತ್ರ ಸಿಕ್ಕು, ನಂತರದ ರಕ್ತಸಿಕ್ತ ಆಂತರಿಕ ಕಲಹ (ಸಿವಿಲ್ವಾರ್) ಎದುರುಸಿ, ಮುಗಿದಮೇಲೆ ಪ್ರಜಾಪ್ರಭುತ್ವ ರಾಷ್ಟ್ರವಾಗಿ, ಇತ್ತೀಚಿಗೆ ಸಂವಿಧಾನ ಅಳವಡಿಸಿಕೊಂಡ ಅಂಗೋಲ ಆಫ್ರಿಕಾದ ಪ್ರಬಲರಾಷ್ಟ್ರವಾಗುವ ಎಲ್ಲಾ ಲಕ್ಷಣಗಳಿಂದ ದಿನೇ ದಿನೇ ಬೆಳೆಯುತ್ತಿದೆ.

ಕರ್ತವ್ಯ ನಿಮಿತ್ತ ಅಲ್ಲೊಂದು ಆಹಾರ ಸಂಸ್ಕರಣ ಘಟಕದ ಸ್ಥಾಪನೆಯ ಯೋಜನಾ ವ್ಯವಸ್ಥಾಪಕನಾಗಿ (project manager) ಕಳೆದ ನಾಲ್ಕು ವರ್ಷಗಳಿಂದ ಆರು ಬಾರಿ ಪ್ರಾಯಾಣಿಸಿದ್ದೇನೆ. ವೀಸಾ ಸಿಗುವುದೇ ಒಂದು ದೊಡ್ಡ ಸವಾಲು, ಅಲ್ಲಿಗೆ ಪ್ರಾಯಾಣ ಮಾಡಲು ತಿಂಗಳುಗಳ ತಯಾರಿ ಬೇಕು. ಕೋವಿಡ್ ಇನ್ನಷ್ಟು ಹದಗೆಡೆಸಿಬಿಟ್ಟಿದೆ. ಇದೆಲ್ಲದರ ಒಟ್ಟಿಗೆ 26-27 ಗಂಟೆಗಳ, ಮೂರು ವಿಮಾನ ಬದಲಾಯಿಸಿ ಯೋಜನಾ ಸ್ಥಳಕ್ಕೆ ಹೋಗುವುದು ಇನ್ನೊಂದು ಸವಾಲು.

ಜೊತೆಗೆ ಬದಲಾದ ಸಮಯದ ವಲಯ, ನಿದ್ದೆ ಊಟದ ಜೈವಿಕ ಸಮಯ ಬದಲಾವಣೆ ಹೀಗೆ ಅದರದ್ದೇ ಆದ ಸಾಕಷ್ಟು ಸವಾಲುಗಳ ಮಧ್ಯೆ ಈ ಬಾರಿ ಒಂದಾದಮೇಲೊಂದು ವಿಮಾನ ಬದಲಾಯಿಸುವಾಗ ವಿಮಾನದಲ್ಲಿನ ಸಿಬ್ಬಂದಿಗಳ ನಿರ್ಲಕ್ಷ್ಯವೋ, ವ್ಯವಸ್ಥೆಯ ಲೋಪವೋ ನಮ್ಮ ಚೆಕಿನ್ ಸರಂಜಾಮುಗಳು ನಿರ್ದಿಷ್ಟ ಕೊನೆಯ ಊರಿನ ವಿಮಾನ ನಿಲ್ದಾಣಕ್ಕೆ ಬರಲೇ ಇಲ್ಲ .... 

ಅದೊಂದು ಅಟ್ಲಾಂಟಿಕ್ ಮಹಾಸಾಗರ ತೀರದ ಲೊಬಿಟೋ ನಗರಕ್ಕೆ ಹತ್ತಿರದ ಚಿಕ್ಕ ವಿಮಾನ ನಿಲ್ದಾಣ. ದಿನಕ್ಕೆ ಒಂದೋ ಎರಡೋ ವಿಮಾನ ಹಾರಾಟ ಮಾತ್ರ. ವಿಮಾನ ಇಳಿದ ಹದಿನೈದು ನಿಮಿಷದಲ್ಲಿ ಇಡೀ ನಿಲ್ದಾಣವೇ ಖಾಲಿ ಖಾಲಿ. ನಾವಂತೂ ಅಲ್ಲಿ ತಡರಾತ್ರಿ ಇಳಿದು ನಮ್ಮ ಗಂಟಿಗೆ ಕಾದು ಕಾದು ಕಂಗಾಲಾಗಿ ಹೋದೆವು..... ಆಗಾಗಲೇ ಸುಮಾರು ಗಂಟೆಗಳ ಪ್ರಯಾಣಮಾಡಿ, ವಲಸೆಕಾರ್ಯ ಮುಗಿಸಿ, ಕರೊನಾ ತಪಾಸಣೆ ಮುಗಿಸಿ ತಲೆ ಕೆಟ್ಟು ಹೋಗಿತ್ತು. ಅದರಮೇಲೆ ನಮ್ಮ ವಸ್ತು ಕಾಣದೆ,  ಭಾಷೆ ಅರಿಯದ ಆ ಪರದೇಶದಲ್ಲಿ ಅಕ್ಷರಶಃ ಅಬ್ಬೇಪಾರಿಯಾದಂತ ಅನುಭವ! 

ಕೊನೆಗೆ ಅಲ್ಲಿದ್ದ ಒಬ್ಬರೊ ಇಬ್ಬರೊ ಸಿಬ್ಬಂದಿಗೆ ಕಳೆದ ವಸ್ತು ವಿಷಯ ಮುಟ್ಟಿಸಿ, ಅವರು ಅದ್ಯಾವುದೋ ಒಂದು ಪುಸ್ತದದಲ್ಲಿ ಅದನ್ನ ನಮೂದಿಸಿ ನಮ್ಮನ್ನ ಕೈಸನ್ನೆಯಲ್ಲೇ ಹೊರಡಲು ಸೂಚಿಸಿದರು. ಅವರಿಗೆ ಇಂಗ್ಲೀಷ್ ಬಾರದು, ನನಗೆ ಪೋರ್ಚುಗೀಸ್ ಬಾರದು. ಹೀಗೆ ಮೂಕ ಕಿವುಡು ಭಾಷೆಯಲ್ಲೇ ವ್ಯವಹರಿಸಿ, ನಮ್ಮ ವಸ್ತುಗಳು ಸಿಗುವ ಯಾವುದೇ ವಿಶ್ವಾಸ,  ಕಳೆದಿದ್ದಕ್ಕೆ ಕೊಟ್ಟ ದೂರಿನ ಸ್ವೀಕೃತಿ ಪತ್ರ ಯಾವುದೊಂದೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ಹೊರಗೆ ಬರಬೇಕಾಯಿತು..... 

ವಿಮಾನ ಬಂದ ಕೇಲವೇ ನಿಮಿಷಗಳಲ್ಲಿ ಇಡೀ ಜಾಗ ಜನರಿಲ್ಲದೆ ಬಿಕೋ ಎನ್ನುವಾಗ ತಡವಾಗಿ ಹೊರಬಂದ ನಮಗೆ ಆಚೆಯೂ ಕೂಡ ಖಾಲಿ ಖಾಲಿ, ರಾತ್ರಿ ಬೇರೆ (ಪಟ್ಟಣದಿಂದ 15-20ಕಿಮೀ ದೂರದ ಅಟ್ಲಾಂಟಿಕ್ ಮಹಾಸಾಗರ ತೀರದ ನಿರ್ಜನ ಪ್ರದೇಶದ ವಿಮಾನ ನಿಲ್ದಾಣವದು) ನಮಗಾಗಿ ನಿಯೋಜಿಸಿದ್ದ ಗಾಡಿ ಮತ್ತು ಡ್ರೈವರ್ ಯಾರೂ ಬಂದಿಲ್ಲವೆಂದು ಹಿಂದಿರುಗಿಬಿಟ್ಟಿದ್ದರೆ? ಇನ್ನೊಂದು ಆತಂಕ !

ಸಧ್ಯ ಹಾಗಾಗಿರಲಿಲ್ಲ, ಅವನೊಬ್ಬನೇ ಒಂದೇ ಒಂದು ಗಾಡಿಯೊಂದಿಗೆ ಮಾತ್ರ ಪಾರ್ಕಿಂಗ್ ಪ್ರದೇಶದಲ್ಲಿ ಕಾಯುತ್ತಿದ್ದ! ಹೋಟೆಲ್ ರೂಮಿಗೆಹೋಗಿ ನಮ್ಮ ಗ್ರಾಹಕರ ಕಚೇರಿಯಲ್ಲಿ ಪ್ರಯಾಣದ ವ್ಯವಸ್ಥಾಪಕರನ್ನ ಸಂಪರ್ಕಿಸಿ, ಅನಂತರ ಮರುದಿನ ಬೆಳಿಗ್ಗೆ ನಮ್ಮ ಕಛೇರಿಯವರನ್ನ ಸಂಪರ್ಕಿಸಿ, ನಿರಂತರ ಮೂರು ದಿನಗಳ ಫಾಲೋ ಅಪ್ ಮಾಡಿ ಕೊನೆಗೆ ವಾಪಸ್ಸು ಹಿಂತಿರುಗುವ ದಿನ ನಾಮ್ಮ ಸರಂಜಾಮುಗಳು ಕೈಸೇರಿದವು. ಅವು ಆ ದೇಶದ ರಾಜಧಾನಿ ಲುವಾಂಡ ವಿಮಾನ ನಿಲ್ದಾಣದ ಬೆಲ್ಟ್ ಮೇಲೆ ಮಾಲೀಕರಿಗಾಗಿ ತಿರುಗಿ ತಿರುಗಿ ಯಾರೂ ಇಲ್ಲದೆ ಅನಾಥವಾಗಿ ನಿಲ್ದಾಣದ ಸಿಬ್ಬಂದಿಯನ್ನು ಸೇರಿದ್ದವು ! ಆ ಮೂರುದಿನ ಅಲ್ಲೇ ನಮ್ಮ ಅಳತೆಗೆ, ವಿನ್ಯಾಸಕ್ಕೆ ಸಿಕ್ಕುಸಿಗದ ಮಿತವಾದ ಬಟ್ಟೆ ಖರೀದಿಸಿ, ಹೋದ ಕೆಲಸ ಮುಗಿಸಿ, ಕೊನೆಗೆ ಬರುವಾಗ ಹೇಗೆ ಪ್ಯಾಕ್ ಮಾಡಿದ್ದೆವೋ ಹಾಗೇ ವಾಪಸ್ಸು ನಮ್ಮ ಸರಂಜಾಮು ಅಲ್ಲಿನ ಪ್ರಯೋಜನಕ್ಕೆ ಬಾರದೆ ಸಿಕ್ಕವು. ಊಟಕ್ಕಿಲ್ಲದ ಉಪ್ಪಿನಕಾಯಿ ರೀತಿ! ಸಿಕ್ಕಿದ್ದು ನಮ್ಮ ಭಾಗ್ಯವಷ್ಟೇ..... 

ಕೊನೇ ಪಕ್ಷ ಬ್ಯಾಗ್ ದೊರೆಕಿತು ಮತ್ತು ಒಂದು ದೊಡ್ಡ ಪಾಠ ಕಲಿಸಿತು, ಕೈ ಚೀಲದಲ್ಲಿ ಒಂದೋ ಎರಡೋ ಜೊತೆ ಬಟ್ಟೆ ಇಟ್ಟುಕೊಂಡೇ ಚೆಕ್ಕಿನ್ಗೆ ಚೀಲಾ ಹಾಕಬೇಕು!