Tuesday, 3 October 2017

Bay Backed Shrike (ಕಡುಗಂದುಬೆನ್ನಿನ ಕಳಿಂಗ)

ಸಾಮಾನ್ಯವಾಗಿ ಕಾಣಸಿಗುವ ಅಸಮಾನ್ಯ ಬೇಟೆಗಾರ ಹಕ್ಕಿ!
ಕಳಿಂಗಗಳು ಸಾಮಾನ್ಯ ತೆರೆದ ಪ್ರದೇಶ, ಹುಲ್ಲುಗಾವಲುಗಳ ಮುಳ್ಳಿನ ಗಿಡಗಳಮೇಲೆ ಕಾಣಿಸುತ್ತವೆ. ಕಾರಣ ಇದರ ಕಾಲಿನ ಪಂಜಗಳು ಅಷ್ಟಾಗಿ ತನ್ನ ಬೇಟೆಯನ್ನು ಕಾಲಿನಿಂದ ಹಿಡಿದು ಸಿಗಿಯುವಷ್ಟು ಶಕ್ತವಾಗಿರುವುದಿಲ್ಲ, ಈ ದುರ್ಬಲತೆಗೆ ಸೆಡ್ಡು ಹೊಡೆಯುವಂತೆ ಕಳಿಂಗಗಳು ತಾನು ಹಿಡಿದ ಬೇಟೆಯನ್ನು ಚೂಪಾದ ಮುಳ್ಳುಗಳಿಗೆ ತಿವಿದು ಸಿಕ್ಕಿಸಿ ನಂತರ ಕೊಕ್ಕಿನಿಂದ ಸಿಗಿದು ತಿನ್ನುತ್ತದೆ. ಈರೀತಿ ನಡವಳಿಕೆಯಿಂದ ಈ ಪಕ್ಷಿಗಳಿಗೆ ಬುಚ್ಚರ್ ಬಿರ್ಡ್ (Butcher Bird) ಅಂತಾನೂ ಕರೆಯುತ್ತಾರೆ. ಈ ವರ್ತನೆಯನ್ನು ಪುಸ್ತಕದಲ್ಲಿ ಓದಿದ್ದು, ಮೊನ್ನೆ ಇದರ ಚಿತ್ರ ತೆಗೆಯುವಾಗ ಗಮನಿಸಿದ್ದು ಒಳ್ಳೆ ಅನುಭವ!
ಇದರ ಗಾತ್ರ ಗುಬ್ಬಚ್ಚಿ ಅಥವ ಇನ್ನುಸಣ್ಣ ಗಾತ್ರವಷ್ಟೆ, ಕಣ್ಣುಗಳನ್ನು ನಮ್ಮ ಕಣ್ಣುಗಳಿಗೆ ಹೋಲಿಸಹೋದರೆ ಹಲವು ಪಟ್ಟು ಕಳಿಂಗದ ಕಣ್ಣುಗಳು ಸೂಕ್ಷ್ಮ ಮತ್ತು ಪ್ರಬಲ. ಆಕಾಶದಲ್ಲಿ ಯಾವುದಾದರೂ ಗಿಡುಗ ಇದ್ದಲ್ಲಿ ನಮ್ಮಕಡೆ ಸಾಮಾನ್ಯ ವೇಗದಲ್ಲಿ ಬರುತ್ತಿದ್ದಲ್ಲಿ ಕಳಿಂಗಗಳ ದೃಷ್ಠಿಗೆ ಎರಡು ಮೂರು ನಿಮಿಷಗಳ ಮುಂಚೆ ಕಾಣಿಸುವುದಂತೆ, ಕಂಡು ಚಡಪಡಿಸುತ್ತಾ ಗಿಡುಗ ಎಷ್ಟುವೇಗದಲ್ಲಿ ಎಷ್ಟು ಎತ್ತರದಲ್ಲಿ ಯಾವದಿಕ್ಕಿನಲ್ಲಿ ಹಾರಿಬರುತ್ತಿದೆಯೆಂದು ಸೂಚನೆ ನೀಡುತ್ತದಂತೆ! ಅದಾಗಿ ಎರಡು ಮೂರು ನಿಮಿಷಗಳ ನಂತರ ಅಲ್ಲಿದ್ದವರ ಕಣ್ಣಿಗೆ ಒಂದು ಸಣ್ಣ ಚುಕ್ಕೆಯಾಗಿ ಗಿಡುಗ ಕಾಣುವುದಂತೆ. ಇದನ್ನು ಪ್ರಮಾಣಿಸಿ "ಬರ್ಡ್ ಸೆನ್ಸ್" ಪುಸ್ತಕದಲ್ಲಿ ಪ್ರಕಟಿಸಲಾಗಿದೆ! ಈ ಸೂಕ್ಷ್ಮ ದೃಷ್ಠಿ ಬೇಟೆ ಪತ್ತೆಹಚ್ಚುವಲ್ಲಿ, ತನ್ನನ್ನು ತಾನು ಶತ್ರುಗಳಿಂದ ರಕ್ಷಿಸಿಕೊಳ್ಳುವಲ್ಲಿ ಉಪಯುಕ್ತವಲ್ಲವೆ?