Thursday, 4 May 2017

ಕೆರೆಯಲ್ಲಿನ ಜೀವಜಲ ಹಾಗು ಪ್ರಕೃತಿಯ ವಾಹನ

ಇಲ್ಲೇ, ಮನೆಯಿಂದ ಸ್ವಲ್ಪ ದೂರದಲ್ಲಿ ಒಂದು ಕೆರೆಯಿದೆ. ಸಾಕಷ್ಟು ದೊಡ್ಡದು, ನೂರಾರು ಎಕರೆಯಲ್ಲಿ ನೀರು ನಿಲ್ಲುವ ಜಾಗ. ಒಮ್ಮೆ ತುಂಬಿತೆಂದರೆ ಸುತ್ತಲಿನ ಹಳ್ಳಿಗಳ ನೀರಿನ ಬವಣಿ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವಂತಹ ಕೆರೆ. ಹತ್ತಿರದ ಸತ್ತ ಬೋರ್ವೆಲ್ಗಳಿಗೆ ಜೀವತುಂಬುವಷ್ಟು ತನ್ನೊಡಲಲ್ಲಿ ನೀರು ಹಿಡಿದಿಡುವ ಸಾಮರ್ಥ್ಯ. ಸುಮಾರು ಹತ್ತು ವರ್ಷಗಳಿಂದ ಬರದ ಭೀಕರತೆಗೆ ತತ್ತರಿಸಿ ಬಟಾ ಬಯಲಾಗಿ ಹೋಗಿತ್ತು. ದಿಕ್ಕು ಹಾಯಿಸಿದ ಕಡೆಯೆಲ್ಲಾ ಜಾಲಿ ಮರ, ಪಾರ್ಥೇನಿಯಂ, ಲ್ಯಾಂಟಾನ ಇತ್ಯಾದಿ ಕೆಲಸಕ್ಕೆ ಬಾರದ ಗಿಡಗಂಟೆಗಳಿಂದ ಹಾಳುಬಿದ್ದಿತ್ತು. ಜೊತೆಗೆ ಹತ್ತಿರದ ಬೆಂಗ್ಳೂರು, ರಾತ್ರೋರಾತ್ರಿ ಊರಕಸವೆಲ್ಲಾ ಕೆರೆಯಲ್ಲಿ! ದುರ್ನಾತ ಬೀರುವ ಪಕ್ಕದ ಊರಿನ ಚರಂಡಿ ನೀರು ಸೇರಿ ಬೀದಿ ನಾಯಿಗಳ ಸ್ವರ್ಗವಾಗಿಬಿಟ್ಟಿತ್ತು. ಇಷ್ಟೆಲ್ಲಾ ಕರ್ಮಕಾಂಡದ ನಡುವಲ್ಲೂ ಸುಮಾರಷ್ಟು ಹುಲ್ಲುಗಾವಲಿನಲ್ಲಿ ಸಿಗುವ ಜೀವವೈವೆಧ್ಯತೆ ತಮ್ಮನ್ನು ತಾವು ರಕ್ಷಿಸಿಕೊಂಡು ಪೋಶಿಸಿಕೊಂಡು ವಲಸಿಗ ಹಕ್ಕಿಗಳಿಗೂ ಜಾಗಕೊಟ್ಟು ತಾವು ಜೀವನ ನಡೆಸುತ್ತಿದ್ದವು.

ಕಳೆದ 2015ರ ಸೆಪ್ಟೆಂಬರ್, ಮದ್ರಾಸಿ ಚಂಡಮಾರುತದ ಕೃಪೆಯಿಂದ ಈ ಭಾಗದಲ್ಲಿ ಸಾಕಷ್ಟು ಮಳೆಯಾಗಿ ಕೋಡಿ ಹೋಗುವ ಮಟ್ಟಿಗಲ್ಲದಿದ್ದರೂ ಕೆರೆಯ ಬಹುಪಾಲು ಜಾಗ ನೀರಿನಿಂದ ಆವೃತವಾಯಿತು. ಮಳೆಯ ಮರುದಿನ ಕೆರೆಗೆ ಭೇಟಿ ನೀಡಿ ಸಂತಸ ಪಟ್ಟಿದ್ದುಂಟು (ಯಾರಿಗೆತಾನೆ ಖುಷಿಯಾಗಲ್ಲ, ಪಾಳುಬಿದ್ದ ಕೆರೆಗೆ ನೀರು ಬಂದರೆ?). ಆದಿನ ಚೊಚ್ಚಲ ಮಳೆ ನೀರು ಬಿಟ್ಟರೆ ಯಾವ ನೀರಿನ ಪಕ್ಷಿಯಾಗಲಿ, ನೀರಿನಲ್ಲಿ ವಾಸಿಸುವ ಕೀಟಗಳಾಗಲಿ, ಮೀನಾಗಲಿ ಅಥವ ಇನ್ಯಾವುದೇ ಪರಿಸರ ವ್ಯವಸ್ಥೆಯ ಕುರುಹು ಕೂಡ ಇರಲಿಲ್ಲ. ಹುಲ್ಲುಗಾವಲಿನ ಜೀವಿಗಳು ಬೆರೆಲ್ಲೋ ಹೋಗಿರಬಹುದು. ಒಂದೆರಡು ತಾಸು ಕೆರೆಯಂಗಳದಲ್ಲಿ ಕಾಲ ಕಳೆದು ಸೂರ್ಯಾಸ್ಥ ನೋಡಿ ಮನೆಯತ್ತ ಸಾಗಿದೆ. ಮಾರನೇ ದಿನದಿಂದ ಆಫೀಸು ಕೆಲಸ ಇತ್ಯಾದಿ ಬ್ಯುಸಿ ಜೀವನ.

 ಕಾಲಚಕ್ರ ಒಂದುವಾರದಷ್ಟು ಸರ್ರನೆ ತಿರುಗಿ ಮತ್ತೆ ಶನಿವಾರದ ಹತ್ತಿರ ಕರೆದುಕೊಂಡು ಬಂದೇ ಬಿಟ್ಟಿತು. ಕುತೂಹಲ, ಕೆರೆಗೆ ಇನ್ನಷ್ಟು ನೀರು ಬಂದಿರಬಹುದೇ? ಕೆರೆ ಕೋಡಿ ಬೆದ್ದಿರಬಹುದೇ? ಬೇರೇನು ಬೆಳವಣಿಗೆ ಹೀಗೆ ಮತ್ತೆ ಕೆರೆಯತ್ತ ಕರೆದುಕೊಂಡು ಹೋಗುವ ತನಕಾ ಬಿಡಲಿಲ್ಲ!

ಕೆರೆ ಸಮೀಪಿಸುತ್ತಿದ್ದಂತೆ ಅಚ್ಚರಿಕಾದಿತ್ತು. ಅಲ್ಲಿ ಹಲವಾರು ಜಾತಿಯ ನೀರಿನ ಪಕ್ಷಿಗಳ (water fouls) ಹಿಂಡೇ ಇತ್ತು. ಸಿಕ್ಕಾಪಟ್ಟೆ ಚಟುವಟಿಕೆ, ಬೇಟೆ, ಜಗಳ, ಕೂಗುವಿಕೆ, ಕಲರವ ಹೀಗೆ. ನೀರು ನೋಡಿದರೆ ಅಲ್ಲಿ ಜಲಚರಗಳು ಲೆಕ್ಕಕ್ಕೆ ಮೀರಿದಷ್ಟು! ಮೀನುಗಳೂ ಕೂಡ ಬುಳುಕ್ ಬುಳುಕ್.... ಕೆಲವು ಹಾಗೇ ಹಕ್ಕಿಗಳ ಹೊಟ್ಟೆಸೇರುವುದುಂಟು. ಅಲ್ಲಿ ದೊಡ್ಡದೊಂದು ವ್ಯವಸ್ಥಿತ ಪರಿಸರವೇ (eco system) ಸೃಸ್ಟಿಯಾಗಿಬಿಟ್ಟಿತ್ತು - ಕೇವಲ ವಾರದಲ್ಲಿ !

ಒಂದೇ ಯಕ್ಷಪ್ರಶ್ನೆ, ಹತ್ತು ಹಲವಾರು ವರ್ಷ ನೀರೇಕಾಣದೆ ಬಯಲಾಗಿದ್ದ ಕೆರೆಗೆ ಇಷ್ಟೊಂದು ಜೀವವೈವಿಧ್ಯತೆ ಹೇಗೆ? ಯಾರು ಇದನ್ನೆಲ್ಲಾ ತಂದು ಬಿಟ್ಟಿದ್ದು ? ಅದಕ್ಕೆ ಇರಬೇಕು ಹಿಂದಿನವರು ನೀರಿಗೆ ಜೀವಜಲವೆಂದೇ ಕರೆದರು....

ಹರಿಯುವ ನೀರಿನ ಜೊತೆ ಕೆಲ ಜೀವಿಗಳೂ ಬರಬಹುದಲ್ಲದೆ, ಇತರೆ ಕಾರಣಗಳಂತೆ ಇಲ್ಲಿ ಹಕ್ಕಿಗಳ ಪಾತ್ರ ತುಂಬಾ. ನೀರಿನ ಪಕ್ಷಿಗಳಲ್ಲಿ ಅಲೆಮಾರಿಹಕ್ಕಿಗಳ (waders) ಸಂಖ್ಯೆ ಹೆಚ್ಚು; ಉದಾ: ಕೊಕ್ಕರೆಗಳು. ತಾವು ಆಹಾರ ಹುಡುಕುತ್ತ, ಹುಡುಕುತ್ತಾ ಹಳ್ಳಕೊಳ್ಳ, ನದಿ ನಾಲೆಗಳಿಂದ ಇನ್ನೊಂದು ನೀರಿನ ಜಾಗಕ್ಕೆ ವಲಸೆ (ಹತ್ತಾರು, ನೂರಾರು, ಸಾವಿರಾರು ಮೈಲು) ಹೋಗುತ್ತವೆ. ಹೀಗೆ ತುಂಬಿದ ಪರಿಸರದಿಂದ ಹಾರಿದರೆ ತನ್ನ ರೆಕ್ಕೆ, ಪುಕ್ಕ, ಕಾಲು, ಮೈಗೆ ಸಣ್ಣ ಸಣ್ಣ ಜಲಚರಗಳ ಮೊಟ್ಟೆ, ಮರಿಗಳನ್ನ ಅರಿವೆಲ್ಲದೆ ಅಂಟಿಸಿಕೊಂಡು ಹಾರಿ ಇನ್ನೊಂದೆಡೆ ಬಂದು ಬೆಡುತ್ತವೆ. ಈ ರೀತಿ ಪಸರಿಸಿದ ಮೊಟ್ಟೆ, ಜೀವಿಗಳು ಪೂರಕ ವಾತಾವರ್ಣದಲ್ಲಿ ಸಂತತಿ, ಗಣತಿ ಎಲ್ಲಾ ಅಭಿವೃದ್ದಿ ಪಡಿಸಿಕೊಂಡು ಒಂದು ಹೊಸ ಜೀವನವೇ ಹುಟ್ಟುವಂತಾಗುತ್ತದೆ, ದೊಡ್ಡ ಆಹಾರ ಸರಪಳಿಗಳನ್ನೇ ಹುಟ್ಟುಹಾಕುತ್ತದೆ. ಅದಕ್ಕೆ ಹಕ್ಕಿಗಳನ್ನು ಪರಿಸರದ ವಾಹನವೆಂದೇ ಕರೆಯುವುದು... ಸ್ವಲ್ಪ ಮೀನು, ಹುಳುಗಳನ್ನು ತಿಂದರೂ ಆ ಪ್ರಭೇದಗಳಿಗೆ ಮಾಡುವ ಸಹಾಯ, ಅದರ ಮುಂದೆ ಸಾಯಿಸಿ ತಿಂದದ್ದು ಪಾಪವೇನೂ ಅಲ್ಲ.

Wednesday, 3 May 2017

Flame throated bul bul

ಏಯ್ ಬುಲ್ ಬುಲ್ ಮಾತಾಡಕ್ಕಿಲ್ವಾ - ಒರ್ಲ್ದ್ ಫೇಮಸ್ ಡೈಲಾಗ್ ಯಾವ್ ಸಿನೆಮಾದ್ದು ಅಂತ ಹೇಳ್ಬೇಕಾ?

ಹಾಗೆ ನಾವು ಏಯ್ ಬುಲ್ ಬುಲ್ ಕಾಣಕ್ಕಿಲ್ವಾ ಅಂತ ಸುಮಾರು ಕಾಡು ಸುತ್ತಿದ್ದು ಬುಲ್ ಬುಲ್ ಕಾಣಾಕ್ಕಿಲ್ಲಾ ಅಂದ್ರೆ ಕಾಣಾಕ್ಕಿಲ್ಲ ಅಂತ ಹಠಹಿಡಿದಂತೆ ಸಿಕ್ಕೇಇರಲಿಲ್ಲ. ಈ ಸಾರತಿ ನೀರು ಕುಡಿಯೋಕ್ಕೆ ಬಂದು ಈ ರೀತಿ ಸೆರೆ ಸಿಕ್ಕಿತು. ಫ್ಲೇಮ್ ಥ್ರೋಟೆಡ್ ಬುಲ್ ಬುಲ್ ಅಥವ ಕೆಂಪು ಕೊರಳಿನ ಪಿಕಳಾರ ಬುಲ್ ಬುಲ್ ಜಾತಿಯ ಹಕ್ಕಿ ಸಂತತಿ. ನಮ್ಮ ಕರ್ನಾಟಕದ ಕಾಡುಗಳಲ್ಲಿ ವಾಸ, ಕೀಟ ಹಣ್ಣುಗಳ ಸೇವನೆ ಇದರ ಆಹಾರ ಪದ್ಧತಿ. ಗೋವಾದ ರಾಜ್ಯ ಪಕ್ಷಿಕೂಡ ಹೌದು! ಕೊರಳ ಬಣ್ಣ ಬೆಂಕಿ - ಅದಕ್ಕೆ ಫ್ಲೇಮ್ ಹೆಸರು ಇರಬಹುದು - ಇಂತಹ ಹಕ್ಕಿ ಕಂಡಾಗ ನಮ್ಮಲ್ಲಿರುವ ಪಕ್ಷಿ ವೀಕ್ಷಣೆ ಹವ್ಯಾಸದ ಫ್ಲೇಮ್ಗೆ ಫ್ಯೂಲ್ ಹಾಕಿದಂತೆ ಪ್ರೇರಣೆ ಜಾಸ್ತಿ..

ಪಷ್ಚಿಮಘಟ್ಟದ ಖಗರತ್ನಗಳು ...

Monday, 1 May 2017

Malabar Trogon

Malabar Trogon (ಕಾಕರಣೆ)
ಹಣ್ಣು, ಮರದ ಟೊಂಗೆಯ ಮೇಲೆ ಹಾರಾಡುವ ಕಾಡುಹಣ್ಣು. ತಕ್ಷಣ ನೋಡಿದರೆ ಹಾಗೆ, ಸ್ವಲ್ಪ ಗಮನಿಸಿದರೆ ಅಬ್ಬ ಮಲಬಾರ್ ಟ್ರೋಗಾನ್. ಜನ ದೇಶದ ಮೂಲೆಗಳಿಂದ ಸಾವಿರಾರು ಮೈಲು ಬಂದು ಈಹಕ್ಕಿ ಸಿಗದೆ ಬರಿಗೈಯಿಂದ ಹೋಗಿದ್ದುಂಟು.
ನಾ ಪಶ್ಚಿಮಘಟ್ಟಕಾಡುಗಳಿಗೆ ಬೇಟಿ ನೀಡಿದಾಗಲೆಲ್ಲಾ ಐದರಲ್ಲಿ ಮೂರುಬಾರಿ ಸಿಕ್ಕಿದೆ. ಬೆಳಗಿನ ಆರು ಆರುವರೆ ಸುಮಾರಿಗೆ ಕ್ರಿಮಿಕೀಟಗಳ ಬೇಟೆಗೆಂದು ಹೊರಬರುವ ಇದು, ಅಲುಗಾಡದೆ ಮರದ ಕೊಂಬೆಮೇಲೆ ಕೂತಿರುತ್ತದೆ. ಕೆಂಪು ಕಲ್ಲಂಗಡಿ ಹಣ್ಣಿನ ಒಳಬಣ್ಣ ಗಂಡುಪಕ್ಷಿಯ ಮುಂಬಾಗ, ಹಿಂಬಾಗ ಕಿತ್ತಲೆ :) ಜೊತೆಗೆ ಬಿಳಿ ನೆಕ್ಲೇಸ್ ಬೇರೆ... ಸಾಕು, ಈ ಬಾರಿಯ ಪ್ರವಾಸಕ್ಕೆ ಇದೊಂದು ಸಾಕು. ಆದರೂ ಇನ್ನು ಸುಮಾರು ಬಣ್ಣ ಬಣ್ಣದ ಬೇರೆಜಾತಿಯ ಹಕ್ಕಿಗಳೂ ಸಿಕ್ಕಿವೆ - ಒಂದೊಂದರಂತೆ ಪ್ರೋಸಸ್ ಮಾಡಿ ಪೋಸ್ಟ್ ಮಾಡಲಿಕ್ಕೆ ಸಾಕಷ್ಟು ಸಮಯ ಬೇಕು - ಮುಂಬರುವ ದಿನಗಳಲ್ಲಿ ಆಯ್ದ ಫೋಟೊ ಹಾಕುವೆ. ಧನ್ಯವಾದಗಳು.