Monday, 9 January 2023

ಜ್ವರ

 "ರಸ್ತೆಯಲ್ಲಿ ಹೋಗೋ ಮಾರಿನ ಸ್ವಲ್ಪ ಮನೆ ಹೊಕ್ಕಿ ಹೋಗು" ಎಂಬಂತೆ ಯಾವುದೋ ರೋಗ್ ಸುಡುಗಾಡು ವೈರಸ್ಸು ದೇಹ ಹೊಕ್ಕಿ 3-4 ದಿನಗಳಿಂದ ಹಿಂಡು ಹಿಪ್ಪೆಕಾಯಿ ಮಾಡ್ತಾಯಿದೆ ! 

ಸರಿ ದಿನಕ್ಕೆ 24 ಗಂಟೆ ಸಾಕು ಸಲಾದಂತೆ ಇನ್ನೊಂದು 6 ಗಂಟೆ ಎಕ್ಸ್ಟ್ರಾ ಇದ್ದಿದ್ದರೆ ? ಅನ್ನುವಷ್ಟು ವಿಪರೀತ ಕಾರ್ಯನಿರತ ಜೀವನ ಶೈಲಿ ನಮ್ಮದು... ಅತ್ತ ವಾರಾಂತ್ಯ ಬಂದರೆ ತೋಟ, ವಾರದಲ್ಲಿ ಕೆಲಸ.... ಅಮ್ಮ, ಹೆಂಡತಿ, ಅತ್ತೆ ಎಲ್ಲರೂ ಇಷ್ಟೊಂದು ಬ್ಯುಸಿ ಒಳ್ಳೇದಲ್ಲ ಅಂತ ಹಲವು ಸಾರಿ ಹೇಳಿ ಇವನ ಜಾಯ್ಮಾನ ಇಷ್ಟೇ ಅಂತ ಸುಮ್ಮನಾಗಿ ಬಿಟ್ಟಿದ್ದರು..... ಈರೀತಿ ತಗಲಾಕಿಕೊಂಡರೆ ಎಲ್ಲಾ ಕಡೆಯಿಂದ ಗುಣಗಾನ ಕೇಳದೆ ವಿಧಿ ಇಲ್ಲ !


ಈವಾರಾಂತ್ಯ ಶುಕ್ರವಾರ ಸಂಜೆ ಕೆಲಸದ ಸಮಯ ಮುಗಿಸಿ, ಹೊಸಕೋಟೆಯಲ್ಲಿ, ಅದೇ ಯಾವುದೋ ಒಂದು ಜರೂರಿ ಕೆಲಸ ಇಟ್ಟುಕೊಂಡು ಅಕ್ಕನ ಮನೆಯಲ್ಲಿ ಠಿಕಾಣಿ ಹೂಡಿದ್ವಿ.... ಅಲ್ಲೆ ಸ್ವಲ್ಪ ಸುಸ್ತಿನ ಲಕ್ಷಣ ಇತ್ತು. ಬೆಳಿಗ್ಗೆ ಅಷ್ಟೊತ್ತಿಗೆ ಎದ್ದು ತೋಟಕ್ಕೆ ಹೋಗುವ ಯೋಚನೆ ಇತ್ತು (ಗಿಡಕ್ಕೆ ಪಾತಿ ಮಾಡುವ ಶ್ರಮದಾಯಕ ಕೆಲಸದ ಪ್ಲಾನು)

ಶುಕ್ರವಾರ ರಾತ್ರಿ ಜ್ವರ ಬಂದದ್ದೇ ಎಲ್ಲಾ ಪ್ಲಾನು ಮಕ್ಕಾಡೆ ಮಲಗಿ ಮನೆಯವರಿಂದ ಬಾರಿ ಪ್ರತಿರೋಧ ನೋಡಿದ ಮೇಲೆ ಅಲ್ಲೇ ಹೊಸಕೋಟೆಯಲ್ಲಿ ಅಕ್ಕನಮನೆಯಲ್ಲೇ ಅನಿರೀಕ್ಷಿತ ಎರಡು ದಿನ ತಂಗಬೇಕಾಯಿತು, ಇಲ್ಲವಾದರೆ ಒಂದು ರಾತ್ರಿ ಕೂಡ ಕಳಿದಿದ್ದು ನೆನಪಿಲ್ಲ.


ಏಕಾಯಕಿ ಎರಡು ಪೂರ್ತಿ ದಿನ ಸಮಯ ಕಳೆಯುವುದು ಹರಸಾಹಸ, ಜೊತೆಗೆ ಜ್ವರದ ತಾಪ ಬೇರೆ.... ನಮ್ಮ ಕೌಟುಂಬಿಕ ವೈದ್ಯರನ್ನ ಭೇಟಿ ಮಾಡಿ ಕೆಲವು ಪರೀಕ್ಷೆ ಮಾಡಿಸಿದ ಮೇಲೆ ಇದ್ಯಾವುದೋ ರೋಗ್ ವೈರಸ್ಸು ಅಂತ, ತಂತಾನೆ ಹೋಗಬೇಕು ಹಾಗೆ ಅಂತ ತಿಳಿಸಿದರು ..... ಅದೇನೋ ಕರೋನ ಆದಮೇಲೆ ಜ್ವರಗಳ ಸರಧಿ ಜಾಸ್ತಿಯಾದಂತಿದೆ, ಅದನ್ನ ಎದುರಿಸಬೇಕಷ್ಠೆ.....


ಎರಡು ದಿನ ಹೊತ್ತು ಕಳೆಯಲು ಅಪರೂಪಕ್ಕೆ ಮೂರು ಸಿನೆಮಾ ನೋಡಲು ನಿರ್ಧರಿಸಿದೆ

1. ಕಾಂತಾರ (ಒಮ್ಮೆ ನೋಡಿದ್ದೆ ಆದರೂ ತೋಚಿದ್ದು ಮತ್ತೆ ನೋಡಿದೆ)

2. ಗರುಡಗಮನ ವೃಷಭವಾಹನ - ನೋಡಿರಲಿಲ್ಲ, ಆದರೆ ಸಿನೆಮಾ ಭಾರಿ ಇಷ್ಟ ಆಯಿತು

3. ಇದೊಂದು ವಿಶೇಷ ಚಿತ್ರ, ಬಿಡುಗಡೆ ಯಾಗಿದ್ದು 1999, ನಮ್ಮ ಹತ್ತನೇ ತರಗತಿ " ಚಂದ್ರ ಮುಖಿ ಪ್ರಾಣ ಸಖಿ" 

- ಸೀದಾ ಆ ಚಿತ್ರ ಲ್ಯಾಂಡ್ ಲೈನ್, ಪೋಸ್ಟು, ಬ್ಲಾಕ್ ಬೋರ್ಡು ಖಾಸಗಿ ವಾಹನ, ಆಫೀಸಲ್ಲಿ ಒಂದೇ ಒಂದು ಕಂಪ್ಯೂಟರ್ ಅದು ಕ್ಯಾಥೋಡ್ ರೆ ಟ್ಯೂಬ್, ದಪ್ಪ ಮಜುಬೂತಾದ  ಟೀವಿ (ಕನಿಷ್ಠ 20 ವರ್ಷ ಬಾಳಿಕೆ ಬರುತ್ತಿತ್ತು) ಕೈನೆಟಿಕ್ ಹೋಂಡಾ ಸ್ಕೂಟರ್, ಟು ಸ್ಟ್ರೋಕ್ ಜಮಾನ, ಮಾರುತಿ 1000, ಏಸ್ಟೀಮ್ ಕಾರುಗಳು - ಹೀಗೆ ಆ ದಶಕ ಕಣ್ಣ ಮುಂದೆ ಬಂದಂತೆ ಮಾಡಿತು ! ನಮ್ಮ ಇರುವಿಕೆಗೆ ತಂತ್ರಜ್ಞಾನದ ಪ್ರಗತಿ ಅಷ್ಟಿಕ್ಕೇ ಸಾಕಾಗಿತ್ತೇನೋ ಅನ್ನಿಸಿಬಿಡ್ತು..... ಅಂಥ ಒಳ್ಳೆ ಏಕಮಾತ್ರ ಕಥೆ, ನಟನೆ, ಎಲ್ಲಾ ಮನಸ್ಸಿಗೆ ಸಂತೋಷ ತಂದಿತು..... 


ಜ್ವರದ ಹೆಸರಲ್ಲಿ ಸ್ವಲ್ಪ ನನಗೆ ಸ್ವಲ್ಪ ಖಾಸಗಿ ಸಮಯ ಸಿಕ್ಕಿದ್ದು, ಅಕ್ಕನ ಮನೆಯಲ್ಲಿ ಎರಡು ದಿನ ಇದ್ದಿದ್ದು, ಶ್ರೀಮತಿಯವರನ್ನ, ನನಗೆ ಬಂದ ಜ್ವರ- ಅದರ ತಾಪಕ್ಕೆ ಹಾಗೆ ಹುಚ್ಚು ತಮಾಷೆ ಮಾತುಗಳು ಬಂದು, ಎಂದಿಗಿಂತ ವಿಪರೀತ ಗೊಳಿಸಿ ಉರಿದುಬೀಳುವ ಹಾಗೆ ಮಾಡಿದ್ದು , ಚಂದ್ರಮುಖಿ ಪ್ರಾಣಸಖಿ ಚಿತ್ರ ಎಲ್ಲಾ ಸೊಗಸು! 


ಅದರೆ ಜ್ವರ ಮಾತ್ರ ಸಾಕಪ್ಪಾ ಸಾಕು ಎಲ್ಲಿಂದ ಬಂದು ಗೋಳುಹುಯಿಕೋತಾವೋ !

Sunday, 10 April 2022

ಪರದೇಶದಲ್ಲಿ ಕಳೆದ ವಸ್ತು ಮತ್ತೆ ಸಿಕ್ಕಾಗ ಮರುಭೂಮಿಯಲ್ಲಿ ಒಯಾಸಿಸ್ ಸಿಕ್ಕಷ್ಟು - ಲಾಸ್ಟ್ ಅಂಡ್ ಫೌಂಡ್ !

ಪರದೇಶದಲ್ಲಿ ಕಳೆದ ವಸ್ತು ಮತ್ತೆ ಸಿಕ್ಕಾಗ ಮರುಭೂಮಿಯಲ್ಲಿ ಒಯಾಸಿಸ್ ಸಿಕ್ಕಷ್ಟು - 
ಲಾಸ್ಟ್ ಅಂಡ್ ಫೌಂಡ್ !

ಅಂಗೋಲ, ಆಫ್ರಿಕಾ ಖಂಡದ ನೈಋತ್ಯದಲ್ಲಿರುವ ಆ ಪ್ರಾಂತ್ಯದ ಒಂದು ದೊಡ್ಡ ದೇಶ. ಕೆಲವರು ಈ ದೇಶದ ಹೆಸರು ಮೊದಲ ಬಾರಿಗೆ ಕೇಳುತ್ತಿರಬಹುದು. ನನಗೂ ಒಂದೈದು ವರ್ಷಗಳ ಹಿಂದೆ ಇಂಥದ್ದೊಂದು ದೇಶದ ಹೆಸರು ಮೊದಲ ಬಾರಿಗೆ ಕೇಳಿಸಿದ್ದು. ಒಂದೇ ಒಂದು ದಶಕದ ಹಿಂದೆ ಸಂವಿಧಾನ ರಚಿಸಿ ಅಳವಡಿಸಿಕೊಂಡಿರುವ, ತೀರ ಇತ್ತೀಚೆಗಷ್ಟೇ ಅಭಿವೃದ್ಧಿ ಪಥದಲ್ಲಿ ಸಾಗಿರುವದೇಶ.... ಹಳೆಯ ಪೋರ್ಚುಗಲ್ಲರ ಕೈಕೆಳಗಿದ್ದ ಈ ರಾಷ್ಟ್ರಕ್ಕೆ 1975ರಲ್ಲಿ ಸ್ವತಂತ್ರ ಸಿಕ್ಕು, ನಂತರದ ರಕ್ತಸಿಕ್ತ ಆಂತರಿಕ ಕಲಹ (ಸಿವಿಲ್ವಾರ್) ಎದುರುಸಿ, ಮುಗಿದಮೇಲೆ ಪ್ರಜಾಪ್ರಭುತ್ವ ರಾಷ್ಟ್ರವಾಗಿ, ಇತ್ತೀಚಿಗೆ ಸಂವಿಧಾನ ಅಳವಡಿಸಿಕೊಂಡ ಅಂಗೋಲ ಆಫ್ರಿಕಾದ ಪ್ರಬಲರಾಷ್ಟ್ರವಾಗುವ ಎಲ್ಲಾ ಲಕ್ಷಣಗಳಿಂದ ದಿನೇ ದಿನೇ ಬೆಳೆಯುತ್ತಿದೆ.

ಕರ್ತವ್ಯ ನಿಮಿತ್ತ ಅಲ್ಲೊಂದು ಆಹಾರ ಸಂಸ್ಕರಣ ಘಟಕದ ಸ್ಥಾಪನೆಯ ಯೋಜನಾ ವ್ಯವಸ್ಥಾಪಕನಾಗಿ (project manager) ಕಳೆದ ನಾಲ್ಕು ವರ್ಷಗಳಿಂದ ಆರು ಬಾರಿ ಪ್ರಾಯಾಣಿಸಿದ್ದೇನೆ. ವೀಸಾ ಸಿಗುವುದೇ ಒಂದು ದೊಡ್ಡ ಸವಾಲು, ಅಲ್ಲಿಗೆ ಪ್ರಾಯಾಣ ಮಾಡಲು ತಿಂಗಳುಗಳ ತಯಾರಿ ಬೇಕು. ಕೋವಿಡ್ ಇನ್ನಷ್ಟು ಹದಗೆಡೆಸಿಬಿಟ್ಟಿದೆ. ಇದೆಲ್ಲದರ ಒಟ್ಟಿಗೆ 26-27 ಗಂಟೆಗಳ, ಮೂರು ವಿಮಾನ ಬದಲಾಯಿಸಿ ಯೋಜನಾ ಸ್ಥಳಕ್ಕೆ ಹೋಗುವುದು ಇನ್ನೊಂದು ಸವಾಲು.

ಜೊತೆಗೆ ಬದಲಾದ ಸಮಯದ ವಲಯ, ನಿದ್ದೆ ಊಟದ ಜೈವಿಕ ಸಮಯ ಬದಲಾವಣೆ ಹೀಗೆ ಅದರದ್ದೇ ಆದ ಸಾಕಷ್ಟು ಸವಾಲುಗಳ ಮಧ್ಯೆ ಈ ಬಾರಿ ಒಂದಾದಮೇಲೊಂದು ವಿಮಾನ ಬದಲಾಯಿಸುವಾಗ ವಿಮಾನದಲ್ಲಿನ ಸಿಬ್ಬಂದಿಗಳ ನಿರ್ಲಕ್ಷ್ಯವೋ, ವ್ಯವಸ್ಥೆಯ ಲೋಪವೋ ನಮ್ಮ ಚೆಕಿನ್ ಸರಂಜಾಮುಗಳು ನಿರ್ದಿಷ್ಟ ಕೊನೆಯ ಊರಿನ ವಿಮಾನ ನಿಲ್ದಾಣಕ್ಕೆ ಬರಲೇ ಇಲ್ಲ .... 

ಅದೊಂದು ಅಟ್ಲಾಂಟಿಕ್ ಮಹಾಸಾಗರ ತೀರದ ಲೊಬಿಟೋ ನಗರಕ್ಕೆ ಹತ್ತಿರದ ಚಿಕ್ಕ ವಿಮಾನ ನಿಲ್ದಾಣ. ದಿನಕ್ಕೆ ಒಂದೋ ಎರಡೋ ವಿಮಾನ ಹಾರಾಟ ಮಾತ್ರ. ವಿಮಾನ ಇಳಿದ ಹದಿನೈದು ನಿಮಿಷದಲ್ಲಿ ಇಡೀ ನಿಲ್ದಾಣವೇ ಖಾಲಿ ಖಾಲಿ. ನಾವಂತೂ ಅಲ್ಲಿ ತಡರಾತ್ರಿ ಇಳಿದು ನಮ್ಮ ಗಂಟಿಗೆ ಕಾದು ಕಾದು ಕಂಗಾಲಾಗಿ ಹೋದೆವು..... ಆಗಾಗಲೇ ಸುಮಾರು ಗಂಟೆಗಳ ಪ್ರಯಾಣಮಾಡಿ, ವಲಸೆಕಾರ್ಯ ಮುಗಿಸಿ, ಕರೊನಾ ತಪಾಸಣೆ ಮುಗಿಸಿ ತಲೆ ಕೆಟ್ಟು ಹೋಗಿತ್ತು. ಅದರಮೇಲೆ ನಮ್ಮ ವಸ್ತು ಕಾಣದೆ,  ಭಾಷೆ ಅರಿಯದ ಆ ಪರದೇಶದಲ್ಲಿ ಅಕ್ಷರಶಃ ಅಬ್ಬೇಪಾರಿಯಾದಂತ ಅನುಭವ! 

ಕೊನೆಗೆ ಅಲ್ಲಿದ್ದ ಒಬ್ಬರೊ ಇಬ್ಬರೊ ಸಿಬ್ಬಂದಿಗೆ ಕಳೆದ ವಸ್ತು ವಿಷಯ ಮುಟ್ಟಿಸಿ, ಅವರು ಅದ್ಯಾವುದೋ ಒಂದು ಪುಸ್ತದದಲ್ಲಿ ಅದನ್ನ ನಮೂದಿಸಿ ನಮ್ಮನ್ನ ಕೈಸನ್ನೆಯಲ್ಲೇ ಹೊರಡಲು ಸೂಚಿಸಿದರು. ಅವರಿಗೆ ಇಂಗ್ಲೀಷ್ ಬಾರದು, ನನಗೆ ಪೋರ್ಚುಗೀಸ್ ಬಾರದು. ಹೀಗೆ ಮೂಕ ಕಿವುಡು ಭಾಷೆಯಲ್ಲೇ ವ್ಯವಹರಿಸಿ, ನಮ್ಮ ವಸ್ತುಗಳು ಸಿಗುವ ಯಾವುದೇ ವಿಶ್ವಾಸ,  ಕಳೆದಿದ್ದಕ್ಕೆ ಕೊಟ್ಟ ದೂರಿನ ಸ್ವೀಕೃತಿ ಪತ್ರ ಯಾವುದೊಂದೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ಹೊರಗೆ ಬರಬೇಕಾಯಿತು..... 

ವಿಮಾನ ಬಂದ ಕೇಲವೇ ನಿಮಿಷಗಳಲ್ಲಿ ಇಡೀ ಜಾಗ ಜನರಿಲ್ಲದೆ ಬಿಕೋ ಎನ್ನುವಾಗ ತಡವಾಗಿ ಹೊರಬಂದ ನಮಗೆ ಆಚೆಯೂ ಕೂಡ ಖಾಲಿ ಖಾಲಿ, ರಾತ್ರಿ ಬೇರೆ (ಪಟ್ಟಣದಿಂದ 15-20ಕಿಮೀ ದೂರದ ಅಟ್ಲಾಂಟಿಕ್ ಮಹಾಸಾಗರ ತೀರದ ನಿರ್ಜನ ಪ್ರದೇಶದ ವಿಮಾನ ನಿಲ್ದಾಣವದು) ನಮಗಾಗಿ ನಿಯೋಜಿಸಿದ್ದ ಗಾಡಿ ಮತ್ತು ಡ್ರೈವರ್ ಯಾರೂ ಬಂದಿಲ್ಲವೆಂದು ಹಿಂದಿರುಗಿಬಿಟ್ಟಿದ್ದರೆ? ಇನ್ನೊಂದು ಆತಂಕ !

ಸಧ್ಯ ಹಾಗಾಗಿರಲಿಲ್ಲ, ಅವನೊಬ್ಬನೇ ಒಂದೇ ಒಂದು ಗಾಡಿಯೊಂದಿಗೆ ಮಾತ್ರ ಪಾರ್ಕಿಂಗ್ ಪ್ರದೇಶದಲ್ಲಿ ಕಾಯುತ್ತಿದ್ದ! ಹೋಟೆಲ್ ರೂಮಿಗೆಹೋಗಿ ನಮ್ಮ ಗ್ರಾಹಕರ ಕಚೇರಿಯಲ್ಲಿ ಪ್ರಯಾಣದ ವ್ಯವಸ್ಥಾಪಕರನ್ನ ಸಂಪರ್ಕಿಸಿ, ಅನಂತರ ಮರುದಿನ ಬೆಳಿಗ್ಗೆ ನಮ್ಮ ಕಛೇರಿಯವರನ್ನ ಸಂಪರ್ಕಿಸಿ, ನಿರಂತರ ಮೂರು ದಿನಗಳ ಫಾಲೋ ಅಪ್ ಮಾಡಿ ಕೊನೆಗೆ ವಾಪಸ್ಸು ಹಿಂತಿರುಗುವ ದಿನ ನಾಮ್ಮ ಸರಂಜಾಮುಗಳು ಕೈಸೇರಿದವು. ಅವು ಆ ದೇಶದ ರಾಜಧಾನಿ ಲುವಾಂಡ ವಿಮಾನ ನಿಲ್ದಾಣದ ಬೆಲ್ಟ್ ಮೇಲೆ ಮಾಲೀಕರಿಗಾಗಿ ತಿರುಗಿ ತಿರುಗಿ ಯಾರೂ ಇಲ್ಲದೆ ಅನಾಥವಾಗಿ ನಿಲ್ದಾಣದ ಸಿಬ್ಬಂದಿಯನ್ನು ಸೇರಿದ್ದವು ! ಆ ಮೂರುದಿನ ಅಲ್ಲೇ ನಮ್ಮ ಅಳತೆಗೆ, ವಿನ್ಯಾಸಕ್ಕೆ ಸಿಕ್ಕುಸಿಗದ ಮಿತವಾದ ಬಟ್ಟೆ ಖರೀದಿಸಿ, ಹೋದ ಕೆಲಸ ಮುಗಿಸಿ, ಕೊನೆಗೆ ಬರುವಾಗ ಹೇಗೆ ಪ್ಯಾಕ್ ಮಾಡಿದ್ದೆವೋ ಹಾಗೇ ವಾಪಸ್ಸು ನಮ್ಮ ಸರಂಜಾಮು ಅಲ್ಲಿನ ಪ್ರಯೋಜನಕ್ಕೆ ಬಾರದೆ ಸಿಕ್ಕವು. ಊಟಕ್ಕಿಲ್ಲದ ಉಪ್ಪಿನಕಾಯಿ ರೀತಿ! ಸಿಕ್ಕಿದ್ದು ನಮ್ಮ ಭಾಗ್ಯವಷ್ಟೇ..... 

ಕೊನೇ ಪಕ್ಷ ಬ್ಯಾಗ್ ದೊರೆಕಿತು ಮತ್ತು ಒಂದು ದೊಡ್ಡ ಪಾಠ ಕಲಿಸಿತು, ಕೈ ಚೀಲದಲ್ಲಿ ಒಂದೋ ಎರಡೋ ಜೊತೆ ಬಟ್ಟೆ ಇಟ್ಟುಕೊಂಡೇ ಚೆಕ್ಕಿನ್ಗೆ ಚೀಲಾ ಹಾಕಬೇಕು!


Thursday, 3 June 2021

ಹಕ್ಕಿ ಗೂಡು

ವರ್ಷಗಳ ಹಿಂದೆ ಹೀಗೊಂದು ಸುದ್ದಿ ಓದಿದ್ದೆ.

ಅಮೆರಿಕದಲ್ಲಿ ಹಲವು ದಶಲಕ್ಷದ ದೊಡ್ಡ ಜನಪರ ಕಾಮಗಾರಿ ಕೇವಲ ಒಂದು ಹಮ್ಮಿಂಗ್ ಹಕ್ಕಿಯ ಮೊಟ್ಟೆಗಳಿದ್ದ ಗೂಡಿನ ಕಾರಣಕ್ಕೆ ಕೆಲವು ತಿಂಗಳುಗಳೇ (ಮರಿಯಾಗಿ ತಂತಾನೆ ಜಾಗ ಬಿಡುವವರೆಗೆ) ನಿಂತುಹೋಗಿತ್ತಂತೆ ! ಅದೊಂದು ರೋಚಕ ಸುದ್ದಿಯೇ, ಹಮ್ಮಿಂಗ್ ಹಕ್ಕಿ ಪ್ರಪಂಚದ ಅತ್ಯಂತ ಪುಟ್ಟ ಹಕ್ಕಿ, ಹೆಬ್ಬೆರಳ ಗಾತ್ರದ್ದು !

ಈಗ ಅದರ ನೆನಪು ಯಾಕೆ ಅಂತಿದ್ರೆ? ಇವತ್ತು ಬೆಳಿಗ್ಗೆ ತೋಟದಲ್ಲಿ ಬಾಳೆಗಿಡಗಳ ಬುಡದಲ್ಲಿ ಹೆಚ್ಚುವರಿ ಸಸಿಗಳನ್ನ ತೆರವು ಮಾಡುವಾಗ ಒಂದು ಕಡೆ ಬುಲ್ ಬುಲ್ ಹಕ್ಕಿಯ ಮೊಟ್ಟೆಯಿದ್ದ ಗೂಡು ! ಮತ್ತೊಂದು ಕಡೆ ಬೆಣ್ಣೆ ಹಣ್ಣಿನ ಗಿಡದ ಎಲೆಯಲ್ಲಿ ಟುವ್ವಿ ಹಕ್ಕಿ  ಹೊಲೆದಿದ್ದ ನಲ್ಮೆಯ ಪುಟ್ಟ ಮನೆ  ! ಹೆಬ್ಬೇವು ಗಿಡದಲ್ಲಿ ಮಧುರ ಕಂಠ ಹಕ್ಕಿಯ ಮುದ್ದಿನ ಮೇಲಂತಸ್ತು , ಮೊದಲ ಮಳೆಗೆ ಗೊಬ್ಬರಕ್ಕೆ ಹುರಳಿ ಚೆಲ್ಲಲು ಹೋಗಿ ಇನ್ನೊಂದು ಭಾಗದಲ್ಲಿ ಕಾಗಕ್ಕ ಮತ್ತದರ ಸಂಗಾತಿಯಿಂದ ಅಣಕು ಆಕ್ರಮಣದ ಖಡಕ್ ಎಚ್ಚರಿಕೆ.... 

ಅಲ್ಲಿಗೆ, ಆಯಾ ಕೆಲಸ ಅಲ್ಲೇ ಬಿಟ್ಟು, ಆ ಹಕ್ಕಿಗಳ ಸಂತಾನ ಕಾಲ ಮುಗಿಯುವವರೆಗೆ ತೀರ ಅನಿವಾರ್ಯವಾಗದ ಹೊತ್ತು ಅಲ್ಲಿ ಮೂಗುತೂರಿಸುವ ಬಾಬ್ತೆ ಬೇಡವೆಂದು ಬರುವ ಸಮಯದಲ್ಲಿ ಅಂಥಾ ದೊಡ್ಡ ಕಾಮಗಾರಿಯೇ ಮುಂದೂಡಿದ ಸುದ್ದಿ ಓದಿದ್ದು ನೆನಪಿಸಿಕೊಂಡು ನಮ್ಮದೇನು ಅನ್ನಿಸಿತು ! 

ಅವು ಬಿಟ್ಟಿದ್ದ ಉಳಿದ ಭಾಗದಲ್ಲಿ ನಮ್ಮ ಕೃಷಿ ...

ಆಫ್ಟರ್ ಆಲ್ ಈ ಹಕ್ಕಿಗಳ ಹಿಂದೆ ಬಿದ್ದಿದ್ದಕ್ಕೆ ಕೃಷಿಕಡೆ ಒಲವು ಮೂಡಿದ್ದು, ಈ ಹಕ್ಕಿಗಳಿಂದಲೇ ನಮ್ಮಲ್ಲಿ ಕೀಟಗಳ ಹತೋಟಿ !

ಗೂಡು ಕಟ್ಟಿ ಮರಿಗಳಿಗೆ ಗುಟುಕು ನೀಡುವ ಹಕ್ಕಿಗಳು ಶಾಖಾಹಾರಿಯಾಗಿದ್ದರೂ ಮರಿಗಳಿಗೆ ಹುಳು ಹುಪ್ಪಟೆಗಳನ್ನೇ ಗುಟುಕಾಗಿ ಕೊಡುತ್ತವೆ, ಕಾರಣ ಕೀಟಗಳಲ್ಲಿರುವ ಹೇರಳವಾಗಿ ದೊರೆಯುವ ಪ್ರೊಟೀನ್ - ಅಂದರೆ ಗಿಡಗಳನ್ನ ಭಾದಿಸುವ ಕೀಟಗಳ ಹೆಡೆಮುರಿ ಕಟ್ಟಿ ನಿಯಂತ್ರಣದಲ್ಲಿಡಲು ಈ ರೀತಿ ಗೂಡುಗಳು ಬೇಕು. ಗೂಡು ಕಟ್ಟಲು ಹಕ್ಕಿಗಳು ಗಿಡಗಳನ್ನ ಅವಲಂಭಿಸುತ್ತವೆ, ಗಿಡಮರಗಳು ಆಶ್ರಯನೀಡಿ ತಮ್ಮನ್ನ ಹೀರುವ ಕೀಟಗಳನ್ನ ಶಮನ ಮಾಡಿಕೊಳ್ಳುತ್ತವೆ ! ಪ್ರಕೃತಿಯಲ್ಲಿನ ಪರಸ್ಪರ ಅವಲಂಭನೆಗೆ  ಇದೊಂದು ಉದಾಹರಣೆ....




Friday, 24 November 2017

ಕಾಜಾಣಕಂಡು ಹಿಂತಿರುಗುವಾಗ ಸಿಕ್ಕಿದ್ದು ಮಿಂಚುಳ್ಳಿ

ಕಾಜಾಣಕಂಡು ಹಿಂತಿರುಗುವಾಗ ಸಿಕ್ಕಿದ್ದು ಮಿಂಚುಳ್ಳಿ, ಆ ಸಮಯದಲ್ಲಿ ಹಕ್ಕಿಯ ಮೊದಲ ಆಧ್ಯತೆ ಬೇಟೆಯಾಗಿತ್ತು, ಎರಡು ತನ್ನ ಸುರಕ್ಷತೆ ಹಾಗು ಮೂರನೆಯದು ತನ್ನ ಪ್ರಾಂತ್ಯದಲ್ಲಿ ಬೇರೆ ಮಿಂಚುಳ್ಳಿಬಾರದ ಹಾಗೆ ಎಚ್ಚರವಿರುವುದು!
ಎರಡುಗಂಟೆಗಳಲ್ಲಿ ಕೇವಲ ಎರಡೇ ಜಿಗಿತ ಹಿಡಿದಿದ್ದು ಎರಡುಹುಳು ಮಾತ್ರ - ಶೆಖಡ ೧೦೦% ಯಶಸ್ವಿ ಪ್ರಯತ್ನ!
ಕಲಿತದ್ದು? -
೧. ಅಗಾಧವಾದ ತಾಳ್ಮೆ, ಏಕಾಗ್ರತೆ ಹಾಗು ತನ್ನಕೆಲಸದ ಮೇಲೆ ತೀವ್ರನಿಗ (ಫೊಕಸ್),
೨. ಮಾತ್ತು ಪಟ್ಟುಹಿಡಿದು ಕೂತಲ್ಲೇ ಕುಳಿತು ತನ್ನ ಕಾರ್ಯಸಾಧನೆ (ಪರ್ಸಿಸ್ಟನ್ಸ್) - ಬೇಟೆಯಾಡುವುದಕ್ಕೆ ಎಷ್ಟು ಕೌಶಲ್ಯವಿರುತ್ತದೋ, ಬೇಟೆಗೆ ತಪ್ಪಿಸಿಕೊಳ್ಳಲ್ಲು ಅದಕ್ಕಿಂತ ಹೆಚ್ಚು ಮಾರ್ಗಗಳಿರುತ್ತದೆ - ಇವಕ್ಕೆ ಹೊಟ್ಟೆಪಾಡಾದರೆ ಅದಕ್ಕೆ ಸಾವು ಬದುಕಿನ ಪ್ರಶ್ನೆ.
೨. ಪ್ರಕೃತಿಯಲ್ಲಿ ದುರ್ಬಲತೆಗೆ ಜಾಗವಿಲ್ಲ, ಅಲ್ಲಿ ನೂರಾರು ಹುಳುಗಳಿದ್ದು ಯಾವುದೋ ದುರ್ಬಲ ಹುಳ ಮಿಂಚುಳ್ಳಿಗೆ ಆಹಾರವಾಗಿ ನಶಿಸಿಹೋಗಿತ್ತು. ಮಿಂಚುಳ್ಳಿ ಪ್ರಭಲವಾಗಿದ್ದರಿಂದ ಅದರ ಪ್ರಾಂತ್ಯಪ್ರವೇಶಿಸಿದ ಇನ್ನೊಂದು ಮಿಂಚುಳ್ಳಿಯನ್ನು ಓಡಿಸುವಲ್ಲಿ ಯಶಸ್ವಿಯಾಗಿ ತನ್ನ ಜಾಗವನ್ನು ರಕ್ಷಿಸಿಕೊಂಡಿತು, ಇಲ್ಲವಾದಲ್ಲಿ ತನ್ನ ಜಾಗ ತನ್ನ ಜಿವನೋಪಾಯವನ್ನು ಇನ್ನೊಂದು ಹಕ್ಕಿ ಲಪಟಾಯಿಸಿಬಿಡುತ್ತಿತ್ತು!
ಈ ನಿಯಮ ನಮಗೂ ಅನ್ವಯ, ಕಾರ್ಯಸಾಧನೆಗಾಗಿ ಅಗಾಧವಾದ ತಾಳ್ಮೆ, ಏಕಾಗ್ರತೆ ಹಾಗು ಹಿಡಿದ ಕೆಲಸ ಮುಗಿಸುವವರೆಗೂ ಏನೇ ಅಡೆತಡೆಗಳು ಬಂದರೂ ಮಧ್ಯೆ ಬಿಡದೆ ನಿರಂತರ ಪರಿಶ್ರಮ, ಎಲ್ಲದಕ್ಕಿಂತ ಹೆಚ್ಚು ಮಾನಸಿಕ ಪ್ರಾಭಲ್ಯತೆಯ ಅಗತ್ಯವಿದೆ!

Monday, 20 November 2017

ಕಾಜಾಣ, ಮಿಂಚಿಳ್ಳಿಯ ಹಿಂದೆ ಹೋದಾಗ ಕಂಡದ್ದು ಗೀಚಿದ್ದು

ಕಾಜಾಣ, ಮಿಂಚಿಳ್ಳಿಯ ಹಿಂದೆ ಹೋದಾಗ ಕಂಡದ್ದು ಗೀಚಿದ್ದು -
ಬೆಳ್ಳಂಬೆಳಿಗ್ಗೆ ಎದ್ದದ್ದೆ ರೆಡಿಯಾಗಿ ಕಾಪಿಹೀರಿ ಹೊರಟದ್ದು ಸಮೀಪದಲ್ಲಿದ್ದ ರಾಗಿ ಹೊಲಕ್ಕೆ. ಕಾಜಾಣಗಳಗುಂಪೊಂದು ಕಂಬದ ಮುಳ್ಳುತಂತಿಯ ಮೇಲೆ ಕುಳಿತು ಬೇಟೆಗಾಗಿ ಹೊಂಚುಹಾಕುತ್ತಿತ್ತು. ಒಂದಂತೂ ಚಂಗನೆ ಹಾರಿ ಚಿಟ್ಟೆಯನ್ನು ಹಿಡಿದೇ ಬಿಟ್ಟಿತು. ಸ್ಚಲ್ಪ ದೂರದಲ್ಲಿ ಕೂತು ನುಂಗಿದ ನಂತರ ಗುಂಪಿನಬಳಿ ಬಂದದ್ದೆ ಕಿಚ ಪಿಚ ಕಿಚ ಪಿಚ ಗಲಾಟೆ, ಅಲ್ಲೆ ಅವುಗಳ ಮಧ್ಯೆಯೇ ಏನೋ ಕಿರಿ ಕಿರಿ, ವೈಮನಸ್ಸೆನೋ, ಒಂದರನೊಂದು ಬೈದಂತೆ, ಅಲ್ಲೆ ಏನೋ ಅದರಬಾಷೆಯಲ್ಲಿ ಸಾಕಷ್ಟು ವಾದವಿವಾದಗಳು, ಅದರ ಮಧ್ಯೆ ನನ್ನಿರುವಿಕೆಗೆ ಕ್ಯಾರೆ ಎನ್ನುವಷ್ಟು ಗಮನವೂ ಇಲ್ಲ (ಇಲ್ಲವಿದ್ದಲ್ಲಿ ಮನುಷ್ಯರನ್ನು ಕಂಡಂತೆ ತುಸು ದೂರ ಹಾರಿಹೋಗುವ ಹಕ್ಕಿ ಅದು). ನನಗಂತು ಅಲ್ಲೇನೋ ಅವುಗಳ ಮಧ್ಯೆ ಬಿನ್ನಾಭಿಪ್ರಾಯವಿದೆ ಅಷ್ಟೆಂಬುದು ಮಾತ್ರ ಅರ್ಥವಾಗುತ್ತಿದೆ ಹೊರತು ಅವು ಏನು ಮಾತಾಡುತ್ತಿವೆ ತಿಳಿಯುತ್ತಿಲ್ಲ, ತಿಳಿಯಲು ಆಸೆ, ಕಾತುರ ಆದರೆ ಅಸಹಾಯಕತೆ. ಸ್ವಲ್ಪಸಮಯದನಂತರ ಆಗುಂಪಿನಲ್ಲಿದ್ದ ಹಕ್ಕಿಗಳು ತಮ್ಮಪಾಡಿಗೆ ಏನೋ ಒಂದು ಒಪ್ಪಂದಮಾಡಿಕೊಂಡಹಾಗೆ ಸುಮ್ಮನಾಗಿ ವಿಭಾಗವಾಗಿ ಬೇರೆ ಬೇರೆ ಕಂಬಗಳ ಮೇಲೆ ಬೇಟೆಗಾಗಿ ಕುಳಿತು ಸುಮ್ಮನಾದವು. ಹಾಗೆ ಆಗುಂಪಿನಿಂದ ಹಾರಿದ ಒಂದು ಹಕ್ಕಿಯನ್ನು ಹಿಂಬಾಲಿಸ ಹೋದದ್ದೇ ಆ ಹೊಲಕ್ಕೆ ಅಂಟಿಕೊಂಡಿದ್ದ ಸರ್ವೇತೋಪಿನತ್ತ ! ಆ ಪ್ರದೇಶಕ್ಕೆ ಬೇರೆ ಯಾವ ಹಕ್ಕಿ ಹೋಗಬೇಕಾದರೂ ಎರಡೆರಡು ಗುಂಡಿಗೆಬೇಕು, ಕಾರಣ ಆಜಾಗ ಗಿಡುಗಗಳ ಅಡ್ಡೆ! ಹೆಚ್ಚುಕಡಿಮೆ ಯಾಮಾರಿದರೆ ಯಾವುದಾದರೊಂದರ ಬೆಳಗ್ಗಿನ ತಿಂಡಿಯಾಗಿಬೆಡಬೇಕಾಗುತ್ತದೆ! ಗಿಡುಗಗಳಿಗೇ ಚಳ್ಳೆಹಣ್ಣು ತಿನ್ನಿಸುವ ಕಾಗೆ, ಕಾಜಾಣಗಳಿಗೆ ಮಾತ್ರ ಈರೀತಿ ದುಸ್ಸಾಹಸ ಯೋಗ್ಯ.... ನಾಹೋದದ್ದೆ ಕೆಳಗೆ ಸಣ್ಣಕಂಬದ ಮೇಲೆ ಕಾಜಾಣ, ಮೇಲೆ ಮರದ ಟೊಂಗೆಯಲ್ಲಿ ಭಾರಿಗಾತ್ರದ ಚುಕ್ಕೆ ಗಿಡುಗ! ಆದಿನ ಸಾರ್ಥಕ.... ಸರಿ ಒಳ್ಳೆಯ ವೀಕ್ಷಣೆಯಾಯಿತೆಂದು ಹಿಂದಿರುಗಿಬರುವಾಗ ಕಂಡದ್ದೆ ಮಿಂಚುಳ್ಳಿ - ಅಲ್ಲಿಗೆ ತಕ್ಷಣ ನೆನಪಿಗೆ ಬಂದಿದ್ದು ಗೆಜ್ಜೆನಾದ ಸಿನೆಮಾದ ಅದ್ಭುತ ಹಾಡು -
"ಮಳ್ಳಿ ಮಳ್ಳಿ ಮಿಂಚುಳ್ಳಿ
ಜಾಣ ಜಾಣ ಕಾಜಾಣ
ಪೂರ್ವ ಪೂರ ಕೆಂಪಾಯ್ತು
ಗಾಳಿ ಗಂಧ ತಂಪಾಯ್ತು
ದಿನವಿಡಿ ಇದೆತರಾ
ಇದ್ದರೆಷ್ಟು ಚೆನ್ನ ಚೆನ್ನ
ಏಳಿ ಏಳಿ ಎಲ್ಲ
ಈ ಭೂಮಿಗಾಯ್ತು ಮೆಲ್ಲ
ಆ ದಿನಾಕರನ ಉದಯ
ದಿವಾಕರನ ಉದಯ" ...........

ಅಲ್ಲೊಂದು ಎರಡು ಗಂಟೆ ಗೊತ್ತಿಲ್ಲದೆ ಕಳೆದುಹೋಯಿತು ಮಿಂಚುಳ್ಳಿಯ ಚಟುವಟಿಕೆ ನೋಡುತ್ತಾ...... ಮುಂದೆ  ಮಿಂಚುಳ್ಳಿಯಿಂದ ಸ್ವಾರಸ್ಯ ಕಾದಿತ್ತು ... ಒಂದೆರಡು ದಿನದಲ್ಲಿ ಬರೆಯುವೆ.....

Tuesday, 3 October 2017

Bay Backed Shrike (ಕಡುಗಂದುಬೆನ್ನಿನ ಕಳಿಂಗ)

ಸಾಮಾನ್ಯವಾಗಿ ಕಾಣಸಿಗುವ ಅಸಮಾನ್ಯ ಬೇಟೆಗಾರ ಹಕ್ಕಿ!
ಕಳಿಂಗಗಳು ಸಾಮಾನ್ಯ ತೆರೆದ ಪ್ರದೇಶ, ಹುಲ್ಲುಗಾವಲುಗಳ ಮುಳ್ಳಿನ ಗಿಡಗಳಮೇಲೆ ಕಾಣಿಸುತ್ತವೆ. ಕಾರಣ ಇದರ ಕಾಲಿನ ಪಂಜಗಳು ಅಷ್ಟಾಗಿ ತನ್ನ ಬೇಟೆಯನ್ನು ಕಾಲಿನಿಂದ ಹಿಡಿದು ಸಿಗಿಯುವಷ್ಟು ಶಕ್ತವಾಗಿರುವುದಿಲ್ಲ, ಈ ದುರ್ಬಲತೆಗೆ ಸೆಡ್ಡು ಹೊಡೆಯುವಂತೆ ಕಳಿಂಗಗಳು ತಾನು ಹಿಡಿದ ಬೇಟೆಯನ್ನು ಚೂಪಾದ ಮುಳ್ಳುಗಳಿಗೆ ತಿವಿದು ಸಿಕ್ಕಿಸಿ ನಂತರ ಕೊಕ್ಕಿನಿಂದ ಸಿಗಿದು ತಿನ್ನುತ್ತದೆ. ಈರೀತಿ ನಡವಳಿಕೆಯಿಂದ ಈ ಪಕ್ಷಿಗಳಿಗೆ ಬುಚ್ಚರ್ ಬಿರ್ಡ್ (Butcher Bird) ಅಂತಾನೂ ಕರೆಯುತ್ತಾರೆ. ಈ ವರ್ತನೆಯನ್ನು ಪುಸ್ತಕದಲ್ಲಿ ಓದಿದ್ದು, ಮೊನ್ನೆ ಇದರ ಚಿತ್ರ ತೆಗೆಯುವಾಗ ಗಮನಿಸಿದ್ದು ಒಳ್ಳೆ ಅನುಭವ!
ಇದರ ಗಾತ್ರ ಗುಬ್ಬಚ್ಚಿ ಅಥವ ಇನ್ನುಸಣ್ಣ ಗಾತ್ರವಷ್ಟೆ, ಕಣ್ಣುಗಳನ್ನು ನಮ್ಮ ಕಣ್ಣುಗಳಿಗೆ ಹೋಲಿಸಹೋದರೆ ಹಲವು ಪಟ್ಟು ಕಳಿಂಗದ ಕಣ್ಣುಗಳು ಸೂಕ್ಷ್ಮ ಮತ್ತು ಪ್ರಬಲ. ಆಕಾಶದಲ್ಲಿ ಯಾವುದಾದರೂ ಗಿಡುಗ ಇದ್ದಲ್ಲಿ ನಮ್ಮಕಡೆ ಸಾಮಾನ್ಯ ವೇಗದಲ್ಲಿ ಬರುತ್ತಿದ್ದಲ್ಲಿ ಕಳಿಂಗಗಳ ದೃಷ್ಠಿಗೆ ಎರಡು ಮೂರು ನಿಮಿಷಗಳ ಮುಂಚೆ ಕಾಣಿಸುವುದಂತೆ, ಕಂಡು ಚಡಪಡಿಸುತ್ತಾ ಗಿಡುಗ ಎಷ್ಟುವೇಗದಲ್ಲಿ ಎಷ್ಟು ಎತ್ತರದಲ್ಲಿ ಯಾವದಿಕ್ಕಿನಲ್ಲಿ ಹಾರಿಬರುತ್ತಿದೆಯೆಂದು ಸೂಚನೆ ನೀಡುತ್ತದಂತೆ! ಅದಾಗಿ ಎರಡು ಮೂರು ನಿಮಿಷಗಳ ನಂತರ ಅಲ್ಲಿದ್ದವರ ಕಣ್ಣಿಗೆ ಒಂದು ಸಣ್ಣ ಚುಕ್ಕೆಯಾಗಿ ಗಿಡುಗ ಕಾಣುವುದಂತೆ. ಇದನ್ನು ಪ್ರಮಾಣಿಸಿ "ಬರ್ಡ್ ಸೆನ್ಸ್" ಪುಸ್ತಕದಲ್ಲಿ ಪ್ರಕಟಿಸಲಾಗಿದೆ! ಈ ಸೂಕ್ಷ್ಮ ದೃಷ್ಠಿ ಬೇಟೆ ಪತ್ತೆಹಚ್ಚುವಲ್ಲಿ, ತನ್ನನ್ನು ತಾನು ಶತ್ರುಗಳಿಂದ ರಕ್ಷಿಸಿಕೊಳ್ಳುವಲ್ಲಿ ಉಪಯುಕ್ತವಲ್ಲವೆ?



Thursday, 21 September 2017

Pied Crested Cuckoo or Jacobin's Cuckoo ಚಾತಕ ಪಕ್ಷಿ

ಚಾತಕ ಪಕ್ಷಿ - Pied Crested Cuckoo or Jacobin's Cuckoo
ಒಳ್ಳೆ ಚಾತಕ ಪಕ್ಷಿತರ ಕಾದು ಕುಳಿತೆ, ಕಾದದ್ದಾಯಿತು, ಕಾಯಬೇಕೆ ಇತರೆ ಮಾತು ಆಡು ಭಾಷೆಯಲ್ಲಿ ಬಹಳ ಪ್ರಸ್ತುತ. ಸಾಕಷ್ಟು ತಾಳ್ಮೆಯಿಂದ ಕಾಯಬೇಕಾದರೆ ಹಾಗೆ ಈ ಮಾತು ಬಂದುಬಿಡುತ್ತದೆ. ಇದಕ್ಕೆ ಕಾರಣ ನಮ್ಮ ಜನಪದದಲ್ಲಿ ಚಾತಕ ಪಕ್ಷಿ ಮಳೆ ನೀರಿಗಾಗಿ ಎಷ್ಟೆ ಬಾಯಾರಿಕೆಯಾದರೂ ಕಾದು ಕುಡಿಯುತ್ತದೆ ಎಂಬ ಉಲ್ಲೇಖವಿದೆ (ಇದನ್ನು ಪ್ರಮಾಣಿಸಲು ವಿಜ್ಞಾನದಲ್ಲಿ ದಾಖಲೆಗಳಿರುವುದಿಲ್ಲ). ಅದಿರಲಿ, ಭಾರತದ ಮುಂಗಾರು ಮಳೆಗೆ, ಅದರಲ್ಲೂ ದಕ್ಷಿಣಭಾರತದ ಮುಂಗಾರಿಗೂ ಈ ಚಾತಕ ಪಕ್ಷಿಗೂ ಅವಿನಾಭಾವ ಸಂಭಂದವಿದೆ. ಮುಂಗಾರಮೋಡ ಬರುವ ಸುಮಾರು ಒಂದುವಾರದ ಮುಂಚೆ ಹಠಾತ್ತನೆ ಹಲಾವಾರು ಸಂಖ್ಯೆಯಲ್ಲಿ ಅಲ್ಲಲ್ಲಿ ಕಾಣಿಸುವ ಈ ಹಕ್ಕಿ ಮುಂಚಿತವಾಗಿ ಮುಂಗಾರಿನ ಆಗಮನವನ್ನು ಸೂಚಿಸುತ್ತದೆ. ಆಫ್ರಿಕಾ ಖಂಡದಿಂದ ವಲಸೆ ಬರುವ ಚಾತಕ ಪಕ್ಷಿ ಮುಂಗಾರಿನ ಗಾಳೆಯಲ್ಲಿ ಅದೇ ದಿಕ್ಕಿನಲ್ಲಿ ಕ್ರಮಿಸಿ ದಕ್ಷಿಣ ಭಾರತಕ್ಕೆ ಬಂದಿಳಿಯುತ್ತದೆಂಬ ಸಿದ್ಧಾಂತವಿದೆ.
ಹೊಸಕೋಟೆ ಕೆರೆಗೆ ಚಾತಕ ಪಕ್ಷಿಗೆ ಏನು ನಂಟು? ಮೇ ತಿಂಗಳ ಅಂತ್ಯ ಅಥವ ಜೂನ್ ಮೊದಲವಾರ ಹೊಸಕೋಟೆ ಕೆರೆಯಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಬಿಡುತ್ತವೆ, ನವೆಂಬರ್ ದಿಸೆಂಬರ್ ನಲ್ಲಿ ವಾಪಸ್ಸಾಗುತ್ತದೆ. ವಲಸೆ ಹಕ್ಕಿಗಳಂತೆ ನಿವಾಸಿಗ ಹಕ್ಕಿಗಳನ್ನು ಕರ್ನಾಟಕದಲ್ಲಿ ಕಾಣಬಹುದು. ಕೋಗಿಲೆ ಜಾತಿಯ ಈ ಹಕ್ಕಿ ಪರರ ಗೂಡಿನಲ್ಲಿ ಮೊಟ್ಟೆಯಿಟ್ಟು ಪೇರಿ ಕಿತ್ತುತ್ತದೆ!
ಚಾತಕ ಪಕ್ಷಿಯ ಉಲ್ಲೇಖದೊಂದಿಗೆ 2014ರಲ್ಲಿ ಪತ್ರಿಕಾ ಲೇಖವ ಮಾಡಿದ್ದೆವು, ಅದು "ದಿ ಹಿಂದೂ" ದಿನಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು - ಅದರ ಲಿಂಕ್ ಕೆಳಗೆದೆ
http://www.thehindu.com/features/metroplus/a-pied-cuckoo-flew-over-the-rest/article6376390.ece


Pied Crested Cuckoo is known as harbinger of Monsoon as it makes sudden appearance in India a week prior to onset of Monsoon. It is believed that the bird migrates from Africa along with Southwest Monsoon Winds. Hoskote lake receives this bird during end may or early June. This bird is an indicator of monsoon arrival. According to Hindu mythology and poetry this bird waits for rains to quench its thirst, though there is no supporting scientific evidence. India has both resident and migratory species of Jacobin's cuckoo. Like other birds in cuckoo family this is also a brood parasite and lays eggs in some other birds nest!

An article was made for a prominent "The Hindu" daily and was published in 2014. Link below!
http://www.thehindu.com/features/metroplus/a-pied-cuckoo-flew-over-the-rest/article6376390.ece